ಎಳ್ಳಾರೆ ಮುಳ್ಕಾಡು ಶಾಲೆಗೆ ರಾಷ್ಟ್ರಮಟ್ಟದ SHVR ಪ್ರಶಸ್ತಿ

ಕಾರ್ಕಳ : ದೇಶಾದ್ಯಂತ ಶಾಲೆಗಳಲ್ಲಿ ಸ್ವಚ್ಛತೆ ಮತ್ತು ನೈಮರ್ಲ್ಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡಮಾಡುವ 2025-26ನೇ ಸಾಲಿನ ರಾಷ್ಟ್ರೀಯ ಮಟ್ಟದ ಸ್ವಚ್ಛ ಏವಂ ಹರಿತ್ ವಿದ್ಯಾಲಯ ರೇಟಿಂಗ್ (SHVR) ಪ್ರಶಸ್ತಿಗೆ ಕಾರ್ಕಳ ತಾಲೂಕಿನ ಎಳ್ಳಾರೆ ಮುಳ್ಕಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.

ಉಡುಪಿ ಜಿಲ್ಲೆಯಿಂದ ಭಾಗವಹಿಸಿದ್ದ 1072 ಶಾಲೆಗಳಲ್ಲಿ 8 ಶಾಲೆಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಬಳಿಕ ಕರ್ನಾಟಕದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 20 ಶಾಲೆಗಳಲ್ಲಿ ಮೂರು ಶಾಲೆಗಳಾದ ಮುಳ್ಕಾಡು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಮಂಗಲ ಸ.ಹಿ.ಪ್ರಾ.ಶಾಲೆ ಹಾಗೂ ಮೈಸೂರಿನ ಅಟ್ಟಿಗೋಡು ಪ್ರಾಥಮಿಕ ಶಾಲೆ ಸೇರಿದಂತೆ ಈ ಪ್ರಶಸ್ತಿಗೆ ದೇಶದಾದ್ಯಂತ 191 ಶಾಲೆಗಳು ಆಯ್ಕೆಯಾಗಿದೆ. ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಪ್ರಮಾಣ ಪತ್ರ ಹೊಂದಿದೆ.

1955ರಲ್ಲಿ ಪ್ರಾರಂಭಗೊಂಡ ಎಳ್ಳಾರೆ ಮುಳ್ಕಾಡು ಶಾಲೆಯಲ್ಲಿ ಪ್ರಸ್ತುತ 55 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಂಪ್ಯೂಟರ್‌ ತರಬೇತಿ, ಸ್ಪೋಕನ್‌ ಇಂಗ್ಲೀಷ್‌, ಯೋಗ, ಕರಾಟೆ, ಬ್ಯಾಂಡ್‌ ಸೆಟ್‌, ಆರೋಗ್ಯ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ, ಕೈದೋಟ, ಬಾಲವನ, ಡೈನಿಂಗ್‌ ಹಾಲ್‌ ಸೇರಿದಂತೆ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿದ್ದು, ಮುಖ್ಯ ಶಿಕ್ಷಕರಾದ ಜನಾರ್ಧನ ಬೆಳ್ಳಿರಾಯ ಅವರ ನೇತೃತ್ವದಲ್ಲಿ ಶಿಕ್ಷಕ ವೃಂದ, ಎಸ್‌ಡಿಎಂಸಿ, ಹಳೆವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಹಲವು ಪ್ರಶಸ್ತಿ
ಶಾಲೆಗೆ ಈಗಾಗಲೇ ಉಡುಪಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ (ಸತತ ನಾಲ್ಕು ವರ್ಷ), ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಹಾಗೂ ತಾಲೂಕು ಮಟ್ಟದ ಉತ್ತಮ ಶಾಲೆ ಎಂಬ ಗೌರವಗಳನ್ನು ಪಡೆದಿದೆ.

ಪ್ರಶಸ್ತಿಗಾಗಿ ನೀರು ನಿರ್ವಹಣೆ, ಶೌಚಾಲಯ ಸ್ವಚ್ಛತೆ, ನೈಮರ್ಲ್ಯ ಕಾರ್ಯಾಚರಣೆ ಮತ್ತು ನಿರ್ವಹಣೆ, ನಡವಳಿಕೆ ಮತ್ತು ಬದಲಾವಣೆ ಹಾಗೂ ಮಿಷನ್‌ ಲೈಫ್‌ ಚಟುವಟಿಕೆಗಳನ್ನು ಆಧರಿಸಿ ಎನ್‌ಸಿಇಆರ್‌ಟಿ ಮತ್ತು ಯುನಿಸೆಫ್‌ ತಂಡಗಳು ಮೌಲ್ಯಮಾಪನ ನಡೆಸಿತ್ತು.























error: Content is protected !!
Scroll to Top