ಕಾರ್ಕಳ : 21 ವರ್ಷಕ್ಕಿಂತ ಕಿರಿಯರಿಗೆ ಮದ್ಯ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಪ್ರಾಪ್ತ ವಯಸ್ಕರಿಗೆ ಮದ್ಯ ನೀಡಿರುವುದು ಕಂಡುಬಂದಲ್ಲಿ ಮದ್ಯದ ಪರವಾನಿಗೆ ರದ್ದುಗೊಳಿಸಲು ಅಬಕಾರಿ ಇಲಾಖೆಗೆ ವರದಿ ಸಲ್ಲಿಸಲಾಗುವುದು ಮತ್ತು ದಂಡ ವಿಧಿಸಿ ಪರವಾನಿಗೆ ಹೊಂದಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಕಾರ್ಕಳ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ತಿಳಿಸಿದರು.
ಅವರು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಬಾರ್, ವೈನ್‌ಶಾಪ್ ಮಾಲೀಕರಿಗಾಗಿ ನಡೆದ ಸಭೆಯಲ್ಲಿ ಸರಕಾರದ ಸುತ್ತೋಲೆ ಕುರಿತು ಮಾಹಿತಿ ನೀಡಿದರು.
ಪಬ್, ಬ್ರೆವರೀಸ್, ಬಾರ್ ಕ್ಲಬ್ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಕೇಂದ್ರಗಳ ಅವರಣದಲ್ಲಿ ಸಂಭವಿಸುವ ಯಾವುದೇ ಉಲ್ಲಂಘನೆಗಳಿಗೆ ಬಾರ್ ಮಾಲೀಕರು, ವ್ಯವಸ್ಥಾಪಕರು, ಕಾರ್ಯಕ್ರಮ ಸಂಘಟಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. CL-2 (ವೈನ್ ಸ್ಟೋರ್/ರೀಟೇಲ್) ಪರವಾನಗಿ ಹೊಂದಿರುವವರು ಪಾರ್ಸೆಲ್ ಮಾತ್ರ ನೀಡಬೇಕು. CL-7 (ಹೋಟೆಲ್, ಬಾರ್) ಅಥವಾ CL-9 (ಬಾರ್, ರೆಸ್ಟೋರೆಂಟ್) ಪರವಾನಿಗೆಯಲ್ಲಿ ಪಾರ್ಸೆಲ್ ನೀಡಲು ಅವಕಾಶವಿಲ್ಲ. ವೈನ್‌ಶಾಪ್‌ಗಳು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10:30ರವರೆಗೆ, CL-7 ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 12ರ ತನಕ ಹಾಗೂ CL-9 ಪರವಾನಿಗೆ ಹೊಂದಿರುವವರು ಬೆಳಿಗ್ಗೆ 10ರಿಂದ ರಾತ್ರಿ 11ರವರೆಗೆ ಬಾರ್ ತೆರೆದಿರಬಹುದು. ರೌಡಿ ಶೀಟರ್ ಪಟ್ಟಿಯಲ್ಲಿರುವವರಿಗೆ ಮದ್ಯ ಮಾರಾಟ ಮಾಡಬಾರದು ಎಂದು ಸಂದೀಪ್ ಅವರು ತಿಳಿಸಿದರು.
ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್., ನಗರ ಠಾಣೆ ಎಸ್‌ಐ ಶಿವಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಕಳ ಮಾತ್ರವಲ್ಲದೇ ಹೆಬ್ರಿ ಮತ್ತು ಅಜೆಕಾರು ಪೊಲೀಸ್ ಠಾಣೆಗಳಲ್ಲಿ ಠಾಣಾ ವ್ಯಾಪ್ತಿಯ ಬಾರ್, ವೈನ್ ಶಾಪ್ ಮಾಲೀಕರ ಸಭೆ ನಡೆಯಿತು.


































