ಪ್ರತಿ ಋತುವಿನಲ್ಲಿ ಅದರದ್ದೇ ಆದ ಖುಷಿಯ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾಡುವುದು. ಇದರ ಬಗ್ಗೆ ಕಾಳಜಿ ಹೊಂದಿದರೆ ಅನೇಕ ಸಮಸ್ಯೆಗಳಿಂದ ದೂರವಿರಬಹುದು. ಮಳೆಗಾಲದಲ್ಲಿ ಶೀತ ಕೆಮ್ಮಿನ ಜೊತೆ ತ್ವಚೆಯ ಆರೈಕೆ ಬಹಳ ಮುಖ್ಯ ಇದರ ಬಗ್ಗೆ ತಿಳಿದುಕೊಳ್ಳೋಣ.
ಮಳೆಗಾಲದಲ್ಲಿ ವಾತ ಹಾಗೂ ಪಿತ್ತದೋಷವೂ ಜಾಸ್ತಿ ಇರುವುದರಿಂದ ತ್ವಚೆಯು ರೂಕ್ಷವಾಗುವುದು. ತುರಿಕೆ, ಮೊಡವೆ, ಫಂಗಲ್ ಇನ್ಫೆಕ್ಷನ್ ಆಗಬಹುದು. ಈ ಕಾಲದಲ್ಲಿ ಜೀರ್ಣ ಶಕ್ತಿಯು ಕಮ್ಮಿ ಇರುರುವುದರಿಂದ ತ್ವಚೆಯು ಕಳೆರಹಿತವಾಗುತ್ತದೆ. ಆದ್ದರಿಂದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಹಾಗೂ ಶುದ್ಧ ಸಾತ್ವಿಕ ಆಹಾರ ಸೇವಿಸುವುದು ಹಿತಕರ.
ಮಳೆಗಾಲದಲ್ಲಿ ಏನು ಮಾಡಬೇಕು?
ಆಹಾರ ಹೀಗಿರಲಿ-
ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವಿಸಿರಿ. ಜೀರ್ಣಕ್ರಿಯೆಗೆ ಸಹಾಯವಾಗುವ ಶುಂಠಿ, ಜೀರಿಗೆ ಇಂಗು, ಕರಿಮೆಣಸು ಸೇವಿಸಿ. ಹೆಸರು ಬೇಳೆಯ ಸೂಪು ಒಳ್ಳೆಯದು. ಹಸಿತರಕಾರಿಯ ಸಲಾಡ್‌ಗಳು ಈ ಕಾಲದಲ್ಲಿ ಕಡಿಮೆ ಸೇವಿಸಿ. ಇದು ಜೀರ್ಣವಾಗುವುದಿಲ್ಲ. ಮಳೆಗಾಲದಲ್ಲಿ ಸಿಗುವಂತಹ ಹಣ್ಣು ತರಕಾರಿಯನ್ನು ಸೇವಿಸಿ. ಕರಿದ ಪದಾರ್ಥ, ಅಧಿಕ ಮಸಾಲೆಯುಕ್ತ ಆಹಾರ, ಐಸ್ ಕ್ರೀಮ್‌ಗಳಿಂದ ದೂರವಿರಿ.

ದಿನಾಲು ಅಥವಾ ವಾರಕ್ಕೆ ಒಮ್ಮೆಯಾದರೂ ಎಣ್ಣೆ ಹಚ್ಚಿ ಸ್ನಾನ ಮಾಡಿ. ಇದರಿಂದ ಚರ್ಮದ ಕಲ್ಮಶ ದೂರವಾಗುವುದಲ್ಲದೆ ರಕ್ತ ಸಂಚಾರ ಸರಾಗವಾಗಿ ತ್ವಚೆಯ ಕಾಂತಿ ಹೆಚ್ಚುತ್ತದೆ. ಒಣ ಚರ್ಮ ದೂರವಾಗುತ್ತದೆ. ತೆಂಗಿನೆಣ್ಣೆ, ಎಳ್ಳೆಣ್ಣೆ ಯಾವುದಾದರು ಉಪಯೋಗಿಸಬಹುದು.
ಸಾಬೂನಿನ ಬದಲು ಕಡ್ಲೆಹಿಟ್ಟು ಅಥವಾ ಹೆಸರು ಹಿಟ್ಟು ಬಳಸಿ. ಇದಕ್ಕೆ ಹಸಿ ಹಾಲು ಸೇರಿಸಬಹುದು. ಶ್ರೀಗಂಧದ ಪುಡಿ ಕೂಡ ಸೇರಿಸಬಹುದು. ಸ್ನಾನದ ನೀರಿಗೆ ಎರಡು ಮೂರು ಹನಿ ಬೇವಿನ ಎಣ್ಣೆ ಹಾಕಿ ಅಥವಾ ಬೇವಿನ ಕಷಾಯ ಕೂಡ ಸೇರಿಸಬಹುದು. ಇದರಿಂದ ಫಂಗಲ್ ಇನ್ಫೆಕ್ಷನ್ ಅನ್ನು ತಡೆಯಬಹುದು. ಸ್ನಾನವಾದ ಮೇಲೆ ದೇಹವನ್ನು ಒರೆಸಿ ಶುಷ್ಕವಿಟ್ಟುಕೊಳ್ಳಿ. ಒದ್ದೆ ಬಟ್ಟೆಯ ಫಂಗಲ್ ಇನ್ಫೆಕ್ಷನ್‌ಗೆ ಆಹ್ವಾನ ನೀಡಿದಂತೆ. ಮುಖಕ್ಕೆ ಅಲೋವೆರಾ ರಸ ಹಚ್ಚಿ. ಇದು ಶುಷ್ಕತೆಯನ್ನು ದೂರ ಮಾಡುತ್ತದೆ. ಬೇವಿನ ರಸ, ಅರಿಶಿನ, ಕಡ್ಲೆಹಿಟ್ಟು ಬೆರೆಸಿ ಫೇಸ್ ಪ್ಯಾಕ್‌ಗಳನ್ನು ಹಚ್ಚಬಹುದು. 15 ನಿಮಿಷದ ನಂತರ ತೊಳೆಯಿರಿ. ಇದರಿಂದ ಮೊಡವೆ ನಿಯಂತ್ರಣದಲ್ಲಿರುತ್ತದೆ.
ಮುಖದ ಕಾಂತಿಯನ್ನು ಹೆಚ್ಚಿಸಲು ಮಂಜಿಷ್ಟ ಪುಡಿ ಜೇನುತುಪ್ಪದ ಜೊತೆ ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ಹಾಲು, ಮೊಸರು, ಕಡ್ಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಫೇಸ್ ಪ್ಯಾಕ್ ಗಳನ್ನ ಹಾಕಿದ ಮೇಲೆ ಅಲೋವೆರಾ ರಸವನ್ನು ಹಚ್ಚಿ. ಇದು ಮಾಯಿಶ್ಚರೈಸರ್ ತರ ಕೆಲಸ ಮಾಡುತ್ತದೆ. ತ್ವಚೆಯ ಆರೋಗ್ಯಕ್ಕೆ ನಿದ್ದೆಯು ಬಹಳ ಅವಶ್ಯಕ. ದಿನಾಲು ಆರು ಅಥವಾ ಏಳು ಗಂಟೆಗಳ ನಿದ್ದೆ ಬಹಳ ಮುಖ್ಯ.
ಮಳೆಗಾಲವು ಸಂತೋಷವನ್ನು ನೀಡಬೇಕೆ ಹೊರತು ಆರೋಗ್ಯ ಸಮಸ್ಯೆಗಳನ್ನಲ್ಲ.

























