ನೂತನ ಇಲಾಖೆಗೆ ಪ್ರತ್ಯೇಕ ಮಂತ್ರಿ ನೇಮಕ – ಸಿಎಂ ಡಿಕೆ ಶಿವಕುಮಾರ್
ಬೆಂಗಳೂರು : ರಾಜ್ಯದ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಪ್ರಜಾ ಸೇವೆ ಎನ್ನುವ ಹೊಸ ಇಲಾಖೆ ಸ್ಥಾಪನೆ ಮಾಡಲಾಗಿದೆ. ಇದಕ್ಕೆ ಪ್ರತ್ಯೇಕ ಮಂತ್ರಿಯನ್ನ ಸಹ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಎರಡನೇ ಕ್ಯಾಬಿನೆಟ್ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಂತರ ಸುದ್ದಿಗೋಷ್ಠಿ ನಡೆಸಿ ಮಹತ್ವದ ನಿರ್ಧಾರಗಳನ್ನು ಘೋಷಿಸಿದ್ದಾರೆ. ಈ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಈಶ್ವರ್ ಖಂಡ್ರೆ, ಯು.ಟಿ. ಖಾದರ್ ಉಪಸ್ಥಿತರಿದ್ದರು.

ಒಬ್ಬ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಈ ಇಲಾಖೆ ಕಾರ್ಯಾರಂಭ ಮಾಡಲಿದೆ. ಯಾವುದೇ ಸಚಿವರಿಗೆ ಅರ್ಜಿ ಸಲ್ಲಿಸಿದರೂ ಅದನ್ನು ಈ ಇಲಾಖೆಗೆ ತರಲಾಗುತ್ತದೆ. ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಜಿಲ್ಲಾ ಮಂತ್ರಿಗಳು ಮತ್ತು ಶಾಸಕರು ವಾರಕ್ಕೊಮ್ಮೆ ಜನಸ್ಪಂದನಾ ಸಭೆಗಳನ್ನು ನಡೆಸಬೇಕು. ಅಲ್ಲಿ ತಿಳಿದುಬಂದ ಸಮಸ್ಯೆಗಳನ್ನು ಸಂಪುಟ ಸಭೆಯಲ್ಲಿ ಪರಿಶೀಲಿಸಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.











