ಕೃಷಿ ಕುರಿತು ಅರಿವು ಮೂಡಿಸುವ ಕಾರ್ಯ – ಸುನಿಲ್ ಕುಮಾರ್
ಕಾರ್ಕಳ : ವಿದ್ಯಾರ್ಥಿಗಳಲ್ಲಿ ಕೃಷಿ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕೆಸರಾಟದಂತಹ ಕಾರ್ಯಕ್ರಮಗಳು ಹೆಚ್ಚು ಪೂರಕ. ಇದರೊಂದಿಗೆ ನಮ್ಮ ಪರಂಪರೆ, ಆಚಾರ ವಿಚಾರಗಳನ್ನು ತಿಳಿಸಿಕೊಡುವ ಕಾರ್ಯವಾಗುತ್ತಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಜು. 26ರಂದು ಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಕುಕ್ಕುಂದೂರಿನ ಕೊಡಿಯಾಲ್‌ನಲ್ಲಿ ನಡೆದ ಕೆಸರಾಟ ಪಾಠ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿ.ಪಂ. ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ನ್ಯೂಸ್ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ, ಉದ್ಯಮಿ ರಾಜೇಶ್ ರಾವ್ ಪರಪ್ಪು, ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ
ಗ್ರಾ. ಪಂ. ಮಾಜಿ ಸದಸ್ಯ, ಪ್ರಗತಿಪರ ಕೃಷಿಕ ರವಿ ಕುಮಾರ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ ಚಿಪಳೂಣಕರ್ ಸ್ವಾಗತಿಸಿ, ಹಿಂದಿ ಉಪನ್ಯಾಸಕಿ ರೂಪಾ ನಿರೂಪಿಸಿದರು. ಕನ್ನಡ ಉಪನ್ಯಾಸಕ ಗಣಪತಿ ನಾಯಕ್ ವಂದಿಸಿದರು. ವಿದ್ಯಾರ್ಥಿಗಳಿಗೆ ಹಗ್ಗ ಜಗ್ಗಾಟ, ಓಟ, ಪಿರಮಿಡ್ ರಚನೆ, ರಿಲೇ, ವಾಲಿಬಾಲ್, ತ್ರೋಬಾಲ್ ಮೊದಲಾದ ಕ್ರೀಡೆಗಳು ನಡೆಯಿತು.






































































