ಜನವರಿಯಲ್ಲಿ ಆಳ್ವಾಸ್ ನುಡಿಸಿರಿ‌ – ವಿರಾಸತ್

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸುವ ರಾಷ್ಟ್ರಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಆಳ್ವಾಸ್ ನುಡಿಸಿರಿ–ವಿರಾಸತನ್ನು 2027ರ ಜನವರಿಯಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಆಳ್ವಾಸ್ ನುಡಿಸಿರಿ-ವಿರಾಸತ್‌ನ ರೂವಾರಿ ಡಾ. ಎಂ. ಮೋಹನ ಆಳ್ವ ಅವರ ಸ್ವಗೃಹದಲ್ಲಿ ರವಿವಾರ ನಡೆದ ಮೊದಲ ಸಮಾಲೋಚನಾ ಸಭೆಯಲ್ಲಿ ಮಾತುಕತೆ ನಡೆದಿದ್ದು ಈ ಬಾರಿ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಉತ್ಸವಗಳನ್ನು ಒಂದೇ ವೇಳೆಯಲ್ಲಿ ಆಯೋಜಿಸುವ ಕುರಿತು ನಿರ್ಧಾರವನ್ನು ಕೈಗೊಳ್ಳಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಎಂ. ಮೋಹನ ಆಳ್ವ ಅವರು, ಪ್ರತಿವರ್ಷ ಹೊಸ ಆಲೋಚನೆ, ಹೊಸ ಪರಿಕಲ್ಪನೆ ಹಾಗೂ ಹೊಸ ತಲೆಮಾರಿನ ಭಾಗವಹಿಸುವಿಕೆಗೆ ಆದ್ಯತೆ ನೀಡುತ್ತಾ ಉತ್ಸವವನ್ನು ವಿಸ್ತರಿಸಲಾಗುತ್ತಿದೆ.

ಜನವರಿಯಲ್ಲಿ ನಡೆಯಲಿರುವ ಉತ್ಸವದಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವುದರೊಂದಿಗೆ ಯುವಜನತೆ, ಕನ್ನಡದ ಭವಿಷ್ಯ, ದೇಶೀಯತೆ, ಪರಿಸರ ಸಂರಕ್ಷಣೆ ಹಾಗೂ ಸಹಬಾಳ್ವೆಯಂತಹ ಸಮಕಾಲೀನ ವಿಷಯಗಳ ಕುರಿತು ಗಂಭೀರ ಚರ್ಚೆಗಳಿಗೆ ವೇದಿಕೆ ಕಲ್ಪಿಸಲಾಗುವುದು ಎಂದರು.

ಸಮಾಜದ ವಿವಿಧ ವರ್ಗಗಳನ್ನು ಒಂದೇ ವೇದಿಕೆಗೆ ತಂದು ಸಂವಾದ, ಸೃಜನಶೀಲತೆ, ಸಂಸ್ಕೃತಿ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಸೆಯುವ ಸಮಗ್ರ ಉತ್ಸವವಾಗಿ ನುಡಿಸಿರಿ–ವಿರಾಸತ್ ರೂಪಿಸುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.

ಸಭೆಯಲ್ಲಿ ನುಡಿಸಿರಿಯ ಪರಿಕಲ್ಪನೆ, ಸರ್ವಾಧ್ಯಕ್ಷರ ಆಯ್ಕೆ, ಉದ್ಘಾಟಕರ ಹೆಸರುಗಳು, ವಿವಿಧ ಗೋಷ್ಠಿಗಳ ವಿಷಯಗಳು, ಸಂಪನ್ಮೂಲ ವ್ಯಕ್ತಿಗಳ ಆಯ್ಕೆ, ವಿಶೇಷೋಪನ್ಯಾಸಗಳ ವಿಷಯ ಮತ್ತು ಉಪನ್ಯಾಸಕರ ಪಟ್ಟಿ, ನುಡಿಸಿರಿ ಪ್ರಶಸ್ತಿಗೆ ಅರ್ಹರ ಹೆಸರುಗಳು ಹಾಗೂ ವಿವಿಧ ವೇದಿಕೆಗಳಿಗೆ ನಾಮಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಉತ್ಸವವನ್ನು ಇನ್ನಷ್ಟು ಅರ್ಥಪೂರ್ಣ ಹಾಗೂ ವೈವಿಧ್ಯಮಯವಾಗಿ ರೂಪಿಸಿ ಜನಸಾಮಾನ್ಯರ ಭಾಗವಹಿಸುವಿಕೆಗೆ ಉತ್ತೇಜನ ನೀಡುವ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಪಾದೇಕಲ್ಲು ವಿಷ್ಣು ಭಟ್, ಡಾ. ಧನಂಜಯ ಕುಂಬ್ಳೆ, ಡಾ. ಎಂ. ಪಿ. ಶ್ರೀನಾಥ್, ಬಾಲಕೃಷ್ಣ ಶೆಟ್ಟಿ, ತುಕಾರಾಮ್ ಪೂಜಾರಿ, ಶಕುಂತಲಾ ಶೆಟ್ಟಿ, ಸತ್ಯನಾರಾಯಣ ಮಲ್ಲಿಪಟ್ಟಣ ಹಾಗೂ ವೇಣುಗೋಪಾಲ ಶೆಟ್ಟ ಮೊದಲಾದವರು ಉಪಸ್ಥಿತರಿದ್ದರು. ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು.

































error: Content is protected !!
Scroll to Top