ಕಾರ್ಕಳ ಕಾಂಗ್ರೆಸ್‌ ಪದಾಧಿಕಾರಿಗಳಿಗೆ ಅರಿವು ಮೂಡಿಸುವ ಕಾರ್ಯಾಗಾರದ ಅವಶ್ಯವಿದೆ

ಕಾರ್ಕಳ : ನೀಟ್ ಪ್ರಶ್ನೆ ಪತ್ರಿಕೆ ಬಯಲಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆದ ಬಗ್ಗೆ ಭಾರತೀಯ ಜನತಾ ಪಾರ್ಟಿಗೂ ಆಘಾತ, ದುಃಖವಾಗಿರುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ತಕ್ಷಣ ಕೇಂದ್ರ ಸರಕಾರವು ತುರ್ತಾಗಿ ಕ್ರಮಕೈಗೊಂಡು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿದೆ. ಈಗಾಗಲೇ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕೇವಲ 63 ದಿನಗಳಲ್ಲಿ ನೀಟ್ ಮರು ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟಿದೆ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ತಿಳಿಸಿದ್ದಾರೆ.

ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ (ಎನ್.ಟಿ.ಎ.) ಒಂದು ಸ್ವಾಯತ್ತ ಸಂಸ್ಥೆ. ಪರೀಕ್ಷೆ ನಡೆಸುವ ಮತ್ತು ಫಲಿತಾಂಶ ಪ್ರಕಟಿಸುವ ಸಂಪೂರ್ಣ ಅಧಿಕಾರ ಆ ಸಂಸ್ಥೆ ಹೊಂದಿದ್ದರೂ, ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳದೇ ತಕ್ಷಣ ಕಾರ್ಯಪ್ರವೃತವಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ 2010ರಲ್ಲಿ ರಾಷ್ಟ್ರ ಮಟ್ಟದ ವೈದ್ಯಕೀಯ ಶಿಕ್ಷಣದ ಪ್ರವೇಶದ ಬಗ್ಗೆ ಒಂದೇ ರೀತಿಯ ಪರೀಕ್ಷೆ ನಡೆಸುವ ಪ್ರಸ್ತಾಪವನ್ನು ಮಂಡಿಸಿತ್ತು. ಆ ಪ್ರಸ್ತಾಪವನ್ನು 2013ರಲ್ಲಿ ಕೇಂದ್ರ ಅಂಗೀಕರಿಸಿ ನೀಟ್ ಪರೀಕ್ಷೆಯ ಮೊದಲ ಆವೃತ್ತಿಯು 2013 ಮೇ 5ರಲ್ಲಿ ನಿಗಧಿಯಾಗಿತ್ತು. ಆ ಸಂದರ್ಭದಲ್ಲಿ ಕೇಂದ್ರದಲ್ಲಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ. ಸರಕಾರ ಅಧಿಕಾರದಲ್ಲಿತ್ತು. ಅನಂತರ ನಾನಾ ಕಾರಣಗಳಿಗಾಗಿ ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿ ಇದ್ದ ಕಾರಣ ಹಾಗೂ ನ್ಯಾಯಾಲಯದ ಆದೇಶದಿಂದಾಗಿ ನೀಟ್ ಪರೀಕ್ಷೆಯನ್ನು ನಡೆಸಲಾಗಿಲ್ಲ. ಸದ್ರಿ ವಿಷಯದ ಬಗ್ಗೆ ಕೇಂದ್ರ ಸರಕಾರವು ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ಮೂಲಕ ಪರೀಕ್ಷೆ ನಡೆಸುವ ನಿರ್ಧಾರವನ್ನು ಮಾನ್ಯ ನ್ಯಾಯಾಲಯಕ್ಕೆ ತಿಳಿಸಿ ಮಾನ್ಯ ನ್ಯಾಯಾಲಯವು ಒಪ್ಪಿಕೊಂಡ ಕಾರಣ 2016ರ ಅನಂತರ ನೀಟ್ ಪರೀಕ್ಷೆ ಪುನರಾರಂಭಗೊಂಡಿತು ಎಂದು ರವೀಂದ್ರ ಮೊಯ್ಲಿ ಪ್ರಕಟಣೆಯಲ್ಲಿ ತಿಳಿಸಿದರು.

ವೀರಪ್ಪ ಮೊಯ್ಲಿ ಜಾರಿಗೊಳಿಸಿದ ಸಿಇಟಿ ಮುಂದುವರಿಕೆಗೆ ಸಿದ್ದರಾಮಮಯ್ಯ ಪ್ರಯತ್ನಿಸಿಲ್ಲ ?
ಕೇಂದ್ರ ಸರಕಾರವು 2013ರ ನೀಟ್ ಪರೀಕ್ಷೆಯನ್ನು ಆರಂಭಿಸುವ ಪ್ರಸ್ತಾಪವನ್ನು ಡಾ. ಮನಮೋಹನ್ ಸಿಂಗ್ ನೇತೃತ್ವದ ಸರಕಾರ ತಂದಾಗ ಕರ್ನಾಟಕದಲ್ಲಿ ಬಿಜೆಪಿಯ ನೇತೃತ್ವದ ಸರಕಾರ ಅದನ್ನು ವಿರೋಧಿಸಿತ್ತು. ತದನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಅದೇ ವರ್ಷ ಮೇ ತಿಂಗಳಲ್ಲಿಯೇ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದರೂ ನೀಟ್ ಪರೀಕ್ಷಾ ವಿಧಾನದ ಬಗ್ಗೆ ಚಕಾರ ಎತ್ತಲಿಲ್ಲ. ಹಿಂದುಳಿದ ವರ್ಗಗಳ ನಾಯಕ ಡಾ. ಎಂ. ವೀರಪ್ಪ ಮೊಯ್ಲಿಯವರು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಜಾರಿ ತಂದ ಸಿ.ಇ.ಟಿ. ಪರೀಕ್ಷಾ ವಿಧಾನವನ್ನೇ ಕರ್ನಾಟಕದಲ್ಲಿ ಮುಂದುವರಿಸುವಂತೆ ಅಹಿಂದ ನಾಯಕರೆನಿಸಿಕೊಂಡ ಸಿದ್ದರಾಮಯ್ಯ ಅವರು ಯಾಕೆ ಪ್ರಯತ್ನಿಸಲಿಲ್ಲ ? ಈ ಬಗ್ಗೆ ಕಾಂಗ್ರೆಸ್ ನಾಯಕರು ಸ್ವಷ್ಟಪಡಿಸಲಿ. ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೀಟ್ ಪರೀಕ್ಷೆಯನ್ನು ಈಗಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹೇರಿದ್ದಾರೆ ಎಂದು ಹೇಳಿರುವುದು ಅವರಿಗಿರುವ ಮಾಹಿತಿಯ ಕೊರತೆಯನ್ನು ತೋರಿಸುತ್ತದೆ. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಾತು ಆಳವಿಲ್ಲದೇ ಹರಟುವ ಮೇಲ್ಮೈ ಮಾತಿನಂತಾಗದಿರಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಇದ್ದ ಸಂದರ್ಭದಲ್ಲಿ 2016ರಲ್ಲಿ ಎರಡು ಬಾರಿ ಪಿ.ಯು.ಸಿ. ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಜವಾಬ್ದಾರಿಯನ್ನು ಪಿ.ಯು.ಸಿ. ಮಂಡಳಿಯ ತಲೆಗೆ ಕಟ್ಟಿರುವ ನಿಮಗೆ ಈ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಎಂದು ರವೀಂದ್ರ ಮೊಯ್ಲಿ ಪ್ರಶ್ನಿಸಿದರು.

ಪ್ರಚಾರದ ತೆವಲಿಗಾಗಿ ಕೇಂದ್ರ ಸರಕಾರವನ್ನು ದೂಷಿಸುವುದು ಕೈಬಿಡಿ
ಕಾರ್ಕಳ ಕಾಂಗ್ರೆಸ್ ರಾಜಕೀಯ ವಿಷಯಗಳ ಬಗ್ಗೆ ಮಾಹಿತಿ ಕೊರತೆಯಿಂದ ಬಳಲುತ್ತಿದೆಯೋ ಅಥವಾ ಅವರ ಅಪರಿಜ್ಞಾನವೋ ತಿಳಿಯುತ್ತಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರು‌ ಕಾರ್ಕಳ ಕಾಂಗ್ರೆಸ್‌ ಪದಾಧಿಕಾರಿಗಳಿಗೆ ರಾಜಕೀಯ ವಿಷಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರ ನಡೆಸುವುದು ಉತ್ತಮ. ಕೇವಲ ಪ್ರಚಾರದ ತೆವಲಿಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ದೂಷಿಸುವುದು ಕೈಬಿಟ್ಟು ವಾಸ್ತವಿಕತೆಯನ್ನು ಅರಿಯುವ ಪ್ರಯತ್ನ ಮಾಡಿ ಎಂದು ರವೀಂದ್ರ ಮೊಯ್ಲಿ ಸಲಹೆ ನೀಡಿದರು.





























































































































error: Content is protected !!
Scroll to Top