ವಿಧಾನಸಭೆ ಉಪಸಭಾಧ್ಯಕ್ಷರಾಗಿ ಮಂಕಾಳ ವೈದ್ಯ

ಬೆಂಗಳೂರು : ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಶಾಸಕ ಮಂಕಾಳ ವೈದ್ಯ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕರಾವಳಿಯ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದು ಮೀನುಗಾರಿಕೆ ಹಾಗೂ ಹೋಟೆಲ್ ಉದ್ಯಮದ ಮೂಲಕ ಬದುಕು ಕಟ್ಟಿಕೊಂಡ ಮಂಕಾಳ ವೈದ್ಯ ಅವರು ಜನಸೇವೆಯ ಮೂಲಕ ರಾಜಕೀಯ ಪ್ರವೇಶಿಸಿ ಜಿಲ್ಲಾ ಪಂಚಾಯತ್ ಸದಸ್ಯ, ಶಾಸಕ, ಸಚಿವರಾಗಿ ಬೆಳೆದು ಇದೀಗ ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನದತ್ತ ಸಾಗಿದ್ದಾರೆ.

ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಪ್ರೌಢಶಾಲಾ ಹಂತದಲ್ಲೇ ಶಿಕ್ಷಣ ಮೊಟಕುಗೊಳಿಸಿದ ಮಂಕಾಳ ವೈದ್ಯ ಅವರು, ಬದುಕಿನ ನಿರ್ವಹಣೆಗಾಗಿ ಬೆಂಗಳೂರಿಗೆ ತೆರಳಿ ಹೋಟೆಲ್‌ನಲ್ಲಿ ಕೆಲಸ ಮಾಡಿದರು. ಸುಮಾರು ನಾಲ್ಕು ವರ್ಷಗಳ ಬಳಿಕ ಊರಿಗೆ ಮರಳಿ ಮುರುಡೇಶ್ವರದಲ್ಲಿ ಹೋಟೆಲ್ ಉದ್ಯಮ ಹಾಗೂ ಮೀನುಗಾರಿಕಾ ವ್ಯವಹಾರ ಆರಂಭಿಸಿದರು.
2005ರಲ್ಲಿ ಮಾವಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅವರು, ಬಳಿಕ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

2013ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಚುನಾವಣೆಯಲ್ಲಿ 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಭಟ್ಕಳದ ರಾಜಕೀಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಯೂ ಅವರ ಪಾಲಾಯಿತು.

2014ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಅವರು, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಚುನಾವಣೆಯಲ್ಲಿ ಸೋಲು ಕಂಡರು.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಭಟ್ಕಳ ಕ್ಷೇತ್ರದಿಂದ ಸ್ಪರ್ಧಿಸಿದ ವೈದ್ಯರು 32 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳ ಸಚಿವ ಸ್ಥಾನದ ಜವಾಬ್ದಾರಿ ದೊರೆಯಿತು.

2026ರ ಆಗಸ್ಟ್‌ನಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮಂಕಾಳ ವೈದ್ಯರ ರಾಜಕೀಯ ಬದುಕಿಗೆ ಮತ್ತೊಂದು ಮಹತ್ವದ ತಿರುವು ದೊರೆತಿದೆ. ಸಚಿವ ಸ್ಥಾನದಿಂದ ಹೊರಬಂದ ಬಳಿಕ ಕಾಂಗ್ರೆಸ್ ಪಕ್ಷವು ಅವರನ್ನು ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಇದೀಗ ಉಪಸಭಾಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದಾರೆ.





























































































































error: Content is protected !!
Scroll to Top