ಜೈಲಿಗೆ ಹಾಕಿ, ನೇಣು ಹಾಕಿದ್ರೂ ನಾವು ವಂದೇ ಮಾತರಂ ಗೀತೆಯನ್ನ ಪೂರ್ಣವಾಗಿ ಹಾಡಲ್ಲ : ಬಿ.ಕೆ.ಹರಿಪ್ರಸಾದ್‌

ದೆಹಲಿ : ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ. ಎರಡು ಪ್ಯಾರಾಗಳನ್ನಷ್ಟೇ ಹಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ವಂದೇ ಮಾತರಂಗೆ ಕಾಂಗ್ರೆಸ್‌ ವಿರೋಧವಿಲ್ಲ ಎಂದಿರುವ ಅವರು, ಬಂಕಿಮಚಂದ್ರ ಚಟರ್ಜಿ ಬರೆದಿರುವ ಗೀತೆಯ ಎರಡು ಪ್ಯಾರಾಗಳನ್ನು ಮಾತ್ರ ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲಿ ಹಾಡುತ್ತೇವೆ ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರು ವಂದೇ ಮಾತರಂಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ನೇಣು ಹಾಕಿದರೂ, ಜೈಲಿಗೆ ಹಾಕಿದರೂ ನಾವು ಹಾಡುವುದು ಎರಡು ಪ್ಯಾರಾ ಎಂದಿದ್ದಾರೆ.

ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರಗೀತೆ ಜನಗಣಮನವನ್ನು ಎರಡನೇ ದರ್ಜೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಚಿಹ್ನೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಪಮಾನ ಮಾಡಿದೆ ಎಂದು ಟೀಕಿಸಿದರು.

ನಾವು ವಂದೇ ಮಾತರಂ ವಿರುದ್ಧ ಇಲ್ಲ. ಆದರೆ, ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವುದಿಲ್ಲ. ಎರಡು ಪ್ಯಾರಾಗಳನ್ನು ಮಾತ್ರ ಹಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಪೂರ್ಣ ಗೀತೆ ಹಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರ ಜನರಿಂದ ಆಯ್ಕೆಯಾಗಿದೆ. ಕಾನೂನು ಪಾಲನೆ ಮಾಡಲಿ, ನಮ್ಮ ಆಕ್ಷೇಪವಿಲ್ಲ ಎಂದರು.

ಆರ್‌ಎಸ್‌ಎಸ್‌ ಹಾಗೂ ಹಿಂದೂ ಮಹಾಸಭಾದ ಚಟುವಟಿಕೆಗಳನ್ನು ಪ್ರಸ್ತಾಪಿಸಿದ ಹರಿಪ್ರಸಾದ್, ಸದಾ ವತ್ಸಲೇಯನ್ನು ರಾಷ್ಟ್ರಗೀತೆ ಎಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿದರು. ಆಜಾದ್ ಹಿಂದ್ ಜಿಂದಾಬಾದ್, ಇಂಕಲಾಬ್ ಜಿಂದಾಬಾದ್ ಘೋಷಣೆಗಳನ್ನು ಬಿಜೆಪಿಯವರು ಕೂಗುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ವಂದೇ ಮಾತರಂ ವಿಚಾರವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಸೌಹಾರ್ದತೆ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.





























































































































error: Content is protected !!
Scroll to Top