ಎಸ್‌ಕೆಪಿಎ ಕಾರ್ಕಳ ವಲಯ – ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ ಕಾರ್ಕಳ ವಲಯದ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಪ್ರಯುಕ್ತ ಕಸ್ತೂರ್ಬಾ ಮೆಡಿಕಲ್ ಹಾಸ್ಪಿಟಲ್ ಮಣಿಪಾಲ ಹಾಗೂ ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಹಯೋಗದಲ್ಲಿ ಸಾಲ್ಮರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಜಮಾತುಲ್ ಫಲಾ ಕಾರ್ಕಳ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಯೂನಿಟ್ ಹಾಗೂ ಸುನ್ನೀ ಜಾಮಿಯಾ ಮಸ್ಜಿದ್ ಮಿಯ್ಯಾರು ಅಧ್ಯಕ್ಷ ಮೊಹಮ್ಮದ್ ಗೌಸ್ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಪಿ.ಎ. ಕಾರ್ಕಳ ವಲಯದ ಅಧ್ಯಕ್ಷ ಪ್ರಮೋದ್ ಚಂದ್ರ ಪೈ ಮಾತನಾಡಿ, ಸುಮಾರು 118 ವರ್ಷಗಳ ಇತಿಹಾಸ ಹೊಂದಿರುವ ಶಾಲೆಯು ಹಳೆ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಕ ವೃಂದ ಹಾಗೂ ಪೋಷಕರ ಸಹಕಾರದಿಂದ ಉತ್ತಮವಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ. ಇಲ್ಲಿ ಕಲಿತವರಲ್ಲಿ ಓರ್ವರು ಜಿಲ್ಲಾಧಿಕಾರಿಯಾಗಿ ಹಾಗೂ ಮತ್ತೋರ್ವರು ಎಂ.ಎಲ್.ಸಿ.ಯಾಗಿ ಸೇವೆ ಸಲ್ಲಿಸಿರುವುದು ಅಭಿನಂದನಾರ್ಹ ಎಂದ ಅವರು ಮುಂದಿನ ದಿನಗಳಲ್ಲಿಯೂ ಈ ಶಾಲೆಯಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಅವಕಾಶ ನಮಗೆ ದೊರೆಯಲಿ ಎಂದು ಆಶಿಸಿದರು.

ಛಾಯಾ ಸಾಧಕ ಪ್ರಶಸ್ತಿ
ಎಸ್.ಕೆ.ಪಿ.ಎ. ಕಾರ್ಕಳ ವಲಯದ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷರಾಗಿರುವ, ಸುಮಾರು 20 ವರ್ಷಗಳಿಂದ V4 ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕೆ.ಎಂ. ಖಲೀಲ್ ಅವರಿಗೆ ವಲಯದ ವತಿಯಿಂದ ‘ಛಾಯಾ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಹುಸೇನ್, ಎಸ್.ಡಿ.ಎಂ.ಸಿ. ಅಧ್ಯಕ್ಷ ರಿಯಾಜ್, ಪ್ರಭಾರ ಮುಖ್ಯ ಶಿಕ್ಷಕಿ ಗುಣಮತಿ, ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಡಾ. ಶಿಭಾ, ಎಸ್.ಕೆ.ಪಿ.ಎ. ಕಾರ್ಕಳ ವಲಯದ ಪ್ರಧಾನ ಕಾರ್ಯದರ್ಶಿ ಶೇಖರ್ ಕುಕ್ಕುಜೆ ಹಾಗೂ ಕೋಶಾಧಿಕಾರಿ ವಿ.ಆರ್. ಸತೀಶ್ ಆಚಾರ್ಯ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಇಜಾಜ್ ಶರೀಫ್, ಶಾಲೆಯ ಶಿಕ್ಷಕ ವೃಂದ, ಪೋಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಎಸ್.ಕೆ.ಪಿ.ಎ. ಪದಾಧಿಕಾರಿಗಳು ಹಾಗೂ ಸದಸ್ಯರು, ಕಸ್ತೂರ್ಬಾ ಮೆಡಿಕಲ್ ಹಾಸ್ಪಿಟಲ್ ಮಣಿಪಾಲ ಮತ್ತು ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಎಸ್.ಕೆ.ಪಿ.ಎ. ಕಾರ್ಕಳ ವಲಯದ ಮಾಜಿ ಅಧ್ಯಕ್ಷ ಪ್ರಸಾದ್ ಐಸಿರ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ ಸುಮಾರು 80 ಮಕ್ಕಳಿಗೆ ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ದಂತ ತಪಾಸಣೆ ನಡೆಸಲಾಯಿತು.







































































error: Content is protected !!
Scroll to Top