BWF ವಿಶ್ವ ಚಾಂಪಿಯನ್‌ಶಿಪ್‌ – ವಿಶ್ವ ನಂ. 1 ಆಟಗಾರನನ್ನು ಸೋಲಿಸಿ ಇತಿಹಾಸ ಬರೆದ ಕಾರ್ಕಳದ ಆಯುಷ್ ಶೆಟ್ಟಿ

ದೆಹಲಿ : ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್‌ನ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಹಾಗೂ ಹಾಲಿ ಚಾಂಪಿಯನ್ ಶಿ ಯು ಖಿ ಅವರನ್ನು ಮಣಿಸಿ ಭಾರತದ ಯುವ ಆಟಗಾರ ಆಯುಷ್ ಶೆಟ್ಟಿ ಇತಿಹಾಸ ನಿರ್ಮಿಸಿದ್ದಾರೆ.

ಸೋಮವಾರ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ಚಾಂಪಿಯನ್ಶಿಪ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಆಯುಷ್ 73 ನಿಮಿಷಗಳ ಕಾಲ ನಡೆದ ಅಂತಿಮ-64ರ ಸುತ್ತಿನ ಹಣಾಹಣಿಯಲ್ಲಿ ಚೀನಾದ ಸ್ಟಾರ್ ಆಟಗಾರ ಶಿ ಯು ವಿರುದ್ಧ 21-14, 13-21, 21-19 ಗೇಮ್‌ಗಳ ಅಂತರದಿಂದ ಜಯಶಾಲಿಯಾದರು. ಯೂ ಕಿ ವಿರುದ್ಧ ಆಡಿರುವ ನಾಲ್ಕು ಪಂದ್ಯಗಳಲ್ಲಿ ಇದೇ ಮೊದಲ ಬಾರಿ ಆಯುಷ್ ಗೆಲುವಿನ ನಗೆ ಬೀರಿದ್ದಾರೆ.

ಮೊದಲ ಗೇಮ್ ಅನ್ನು 21-14 ಅಂತರದಿಂದ ಗೆದ್ದುಕೊಂಡ ಆಯುಷ್ ಉತ್ತಮ ಆರಂಭ ಪಡೆದರು. ಎರಡನೇ ಗೇಮ್ ಅನ್ನು 13-21 ಅಂತರದಿಂದ ಗೆದ್ದುಕೊಂಡ ಅಗ್ರ ಶ್ರೇಯಾಂಕದ ಶಿ ಯು ತಿರುಗೇಟು ನೀಡಿ ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು. ಮೂರನೇ ಗೇಮ್ ಅನ್ನು 21-19 ಅಂತರದಿಂದ ರೋಚಕವಾಗಿ ಗೆದ್ದುಕೊಂಡಿರುವ ಆಯುಷ್ ಅಂತಿಮ-32ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ವಿಶ್ವದ ನಂ.22ನೇ ಆಟಗಾರ ಆಯುಷ್ ಮುಂದಿನ ಸುತ್ತಿನಲ್ಲಿ ಶ್ರೀಲಂಕಾದ ದುಮಿಂಡು ಅಭಯವಿಕ್ರಮ ಅಥವಾ ಪೆರುವಿನ ಅಡ್ರಿಯಾನೊ ವಿಯಾಲ್ ಅವರನ್ನು ಎದುರಿಸಲಿದ್ದಾರೆ.

ಆಯುಷ್ ಶೆಟ್ಟಿ ಸಾಣೂರಿನ ಮಿತ್ತಲ ಮನೆಯ ರಾಮ್ ಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ದಂಪತಿ ಪುತ್ರ. ತಮ್ಮ ಎಂಟನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. ಆರಂಭದಲ್ಲಿ ಕಾರ್ಕಳ ಮತ್ತು ಮಂಗಳೂರಿನಲ್ಲಿ ತರಬೇತಿ ಪಡೆದಿದ್ದರು. ನಂತರ ಆಯುಷ್ ಶೆಟ್ಟಿ ಕುಟುಂಬ ಬೆಂಗಳೂರಿಗೆ ಸ್ಥಳಾಂತರವಾಗಿದೆ. ಯುಎಸ್‌ ಓಪನ್‌ BWF Super 300 ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಆಯುಷ್‌ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2025 ರಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿ ಇದಾಗಿದೆ.







































































error: Content is protected !!
Scroll to Top