ಮಹಾಭಾರತ ಭಾವದೀಪ – ಮಹಾನಾಯಕನಾಗಿ ಧರ್ಮರಾಯ 

ಕಾರ್ಕಳ : ನಾಯಕತ್ವ ಎನ್ನುವುದು ಬೇರೆಯವರ ಹೊಗಳಿಕೆ ಆರಾಧನೆಗಳಿಂದ ಬರುವುದಿಲ್ಲ. ಅದು ತನ್ನ ಸ್ವಂತ ಶಕ್ತಿಯಿಂದಲೇ ಬರುವಂಥದ್ದು. ಅಂತಹ ಶಕ್ತಿಯನ್ನು ಹೊಂದಿದ್ದ ಧರ್ಮರಾಯನೇ ಮಹಾಭಾರತದ ನಾಯಕನ ಸ್ಥಾನದಲ್ಲಿ ನಿಲ್ಲುತ್ತಾನೆ. 56 ರಾಷ್ಟ್ರಗಳನ್ನು ಗೆದ್ದು, ರಾಜಸೂಯಯಾಗವನ್ನು ಮಾಡಿ ಸಾರ್ವಭೌಮ ಪದವಿಗೇರಿದ್ದರೂ ಒಂದಿಷ್ಟು ಅಹಂಕಾರವನ್ನು ಮೆರೆಯದೆ ಸಭಾಪರ್ವದಲ್ಲಿ ನಡೆದ ಅನೇಕ ಕಹಿ ಘಟನೆಗಳ ಹೊರತಾಗಿಯೂ ಅದನ್ನೆಲ್ಲ ಮರೆತು ಮುಂದುವರಿಯುವ ಉದಾರತೆ ಮತ್ತು ಮುಂದೆ ಕೌರವ ಪಾಂಡವರ ಮಧ್ಯೆ ಯುದ್ಧ ಸಂಭವಿಸದ ಹಾಗೆ ಏನು ಮಾಡಬಹುದು ಎಂಬುದರ ಬಗ್ಗೆ ಚಿಂತಿಸುತ್ತಾನೆ. ಇದೇ ನಾಯಕತ್ವದ ಗುಣವಿಶೇಷತೆಯಾಗಿದೆ ಎಂದು ಡಾ. ವಿನಾಯಕ ಭಟ್ ಗಾಳಿಮನೆ ತಿಳಿಸಿದರು.

ಅವರು ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2026ರ ವರ್ಷ ಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ ಅಷ್ಟಮ ಸೋಪಾನದಲ್ಲಿ ಅವರು ‘ಸಭಾ ಪರ್ವ’ ಎಂಬ ಕುರಿತಾಗಿ ಆಗಸ್ಟ್ 15 ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುರು ಸಭೆಯಲ್ಲಿ ದ್ರೌಪದಿಯ ಮಾನಭಂಗವಾದಾಗ ಬೆತ್ತಲಾದುದು ದ್ರೌಪದಿಯಲ್ಲ. ಧರ್ಮಾಧರ್ಮಗಳ ಸಂಘರ್ಷದಲ್ಲಿ ಬೆತ್ತಲಾದುದು ಕೌರವನ ಅಧರ್ ಅಕ್ಷಯವಾದುದು ವಸ್ತ್ರಗಳಲ್ಲ ಭಗವಂತನ ಪಾರಮ್ಯ. ಭೀಮನ ಪ್ರತಿಜ್ಞೆಗೆ ಭಯವೆನ್ನುವ ತಳಕ್ಕೆ ಕುಸಿದು ಬಿದ್ದ ಧೃತರಾಷ್ಟ್ರ ದ್ರೌಪದಿಯ ಬೇಡಿಕೆಯಂತೆ ಪಾಂಡವರನ್ನು ಸ್ವತಂತ್ರಗೊಳಿಸಿ ವಶಪಡಿಸಿಕೊಂಡ ಶಸ್ತ್ರಾಸ್ತ್ರ ಸಂಪತ್ತನ್ನೆಲ್ಲ ಹಿಂತಿರುಗಿಸುತ್ತಾನೆ. ನೀನು ಧರ್ಮವನ್ನು ಎಂದಿಗೂ ಮೀರಬೇಡ ಎಂದು ಧರ್ಮರಾಯನಿಗೆ ಹೇಳುವ ಕುಂತಿ, ನೀವೆಲ್ಲರೂ ಧರ್ಮಿಷ್ಠರಾಗಿದ್ದೀರಿ ಎಂಬುದೇ ನನಗೆ ಹೆಮ್ಮೆ ಎಂಬ ಆಕೆಯ ಮಾತೇ ಆದರ್ಶ ತಾಯಿಯ ಗುಣವನ್ನು ತೋರಿಸುತ್ತದೆ. ಮಹಾಭಾರತದ ಎಲ್ಲ ಘಟನೆಗಳು ಮನೋವೈಜ್ಞಾನಿಕವಾದ ಸಂಗತಿಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿರುವುದರಿಂದಲೇ ಮಹಾಭಾರತ ಎಲ್ಲರ ಭಾವದೀಪವಾಗಿ ಇಂದಿಗೂ ಜನಪ್ರಿಯವಾಗಿ ಉಳಿದಿದೆ ಎಂದರು.
ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು. ಶಾರ್ವರಿ  ಶ್ಯಾನುಭೋಗ್ ಪ್ರಾರ್ಥಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಮಾಲತಿ ವಸಂತರಾಜ್ ಕಾರ್ಯಕ್ರಮ ನಿರೂಪಿಸಿ, ಸುಲೋಚನಾ ಬಿ.ವಿ. ವಂದಿಸಿದರು.





























































































































error: Content is protected !!
Scroll to Top