ಲಿಖಿತ ರೂಪದ ಆದೇಶ ಸಿಗುವವರೆಗೆ ಹೋರಾಟ ಮುಂದುವರಿಸಲು ತೀರ್ಮಾನ
ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 2,000 ರೂ. ಹೆಚ್ಚಳ ಮಾಡುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆಗೆ ಒಪ್ಪದ ಆಶಾ ಕಾರ್ಯಕರ್ತೆಯರು ಧರಣಿ ಮುಂದುವರಿಸಲು ನಿರ್ಧರಿಸಿದ್ದಾರೆ. ಲಿಖಿತ ರೂಪದ ಆದೇಶ ಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಲಿಖಿತ ಆದೇಶ ಬರುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಆಶಾ ಕಾರ್ಯಕರ್ತೆಯರ ಸಂಘಟನಾ ಕಾರ್ಯದರ್ಶಿ ನಾಗಲಕ್ಷ್ಮಿ ಹೇಳಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಲಿಖಿತ ರೂಪದಲ್ಲಿ ಆದೇಶ ಬೇಕು ಎನ್ನುವುದು ನಮ್ಮ ಬೇಡಿಕೆ ಆಗಿತ್ತು. ಮುಖ್ಯಮಂತ್ರಿಗಳು ನನ್ನ ಮಾತೇ ಲಿಖಿತ ಎಂದಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರು ಲಿಖಿತ ರೂಪದ ಆದೇಶ ಬೇಕು ಅಂದಿದ್ದಾರೆ. ಆದೇಶ ಪ್ರತಿ ಬರೋವರೆಗೆ ಅಹೋರಾತ್ರಿ ಧರಣಿ ಮುಂದುವರಿಯುತ್ತದೆ ಎಂದಿದ್ದಾರೆ.

ಸಿಎಂಗೆ ಶಾಲು ಹಾಕಿ ಸನ್ಮಾನಿಸಿದ್ದರ ಬಗ್ಗೆ ಕೆಲವರು ತಪ್ಪಾಗಿ ಅರ್ಥ ಕಲ್ಪಿಸುತ್ತಿದ್ದಾರೆ. ಶಾಲು ಹಾಕಿರುವುದು ನಾವಲ್ಲ, ನಾವು ಶಾಲು, ಹೂಗುಚ್ಛ ತೆಗೆದುಕೊಂಡು ಹೋಗಿರಲಿಲ್ಲ. ಸಿಎಂ ಕಚೇರಿಯಲ್ಲೇ ಕೊಟ್ಟರು. ಇದರ ಬಗ್ಗೆ ತಪ್ಪು ಸಂದೇಶ ಹೋಗಬಾರದು. ನಾವು ಸಿಎಂ ಭರವಸೆಗೆ ಧನ್ಯವಾದ ಸಲ್ಲಿಸಿದ್ದೇವೆ ಅಷ್ಟೇ. ಗುಟ್ಟಾಗಿ ಯಾವುದು ಮಾಡುವ ಅವಶ್ಯಕತೆ ಇಲ್ಲ. ನಾವು ತಪ್ಪು ಮಾಡಿದರೆ ನಾಡಿನ ಜನರ ಕ್ಷಮೆ ಕೇಳೋಕೆ ಹಿಂಜರಿಯಲ್ಲ ಅಂತಾ ಹೇಳಿದ್ದಾರೆ.
ಆಶಾ ಕಾರ್ಯಕರ್ತರ ಗೌರವಧನ 2000 ರೂ ಹೆಚ್ಚಿಸಲು ಸರ್ಕಾರ ಒಪ್ಪಿಕೊಂಡಿದೆ. ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರೇ ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ಮಾಡಿ ಸದ್ಯಕ್ಕೆ 2000 ರೂ. ಹೆಚ್ಚಳ ಮಾಡುತ್ತೇವೆ. ಇನ್ನುಳಿದಿರುವುದನ್ನು ಬಜೆಟ್ನಲ್ಲಿ ಘೋಷಿಸುವುದಾಗಿ ಭರವಸೆ ನೀಡಿ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳಿಗೆ ಮನವೊಲಿಸಿದ್ದರು. ಆದರೆ ಪ್ರತಿಭಟನೆ ನಿರತ ಆಶಾ ಕಾರ್ಯಕರ್ತೆಯರು ಇದಕ್ಕೆ ಒಪ್ಪುತ್ತಿಲ್ಲ. ಹೀಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಸಿಎಂ ಸಭೆಯ ತೀರ್ಮಾನಕ್ಕೆ ಆಶಾ ಕಾರ್ಯಕರ್ತೆಯರು ಒಪ್ಪಿಲ್ಲ. ಆ ಕಾರಣಕ್ಕೆ ಸಂಘಟನೆಯ ಮುಖಂಡರು ಹಾಗೂ ಆಶಾ ಕಾರ್ಯಕರ್ತೆಯರು ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ. ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಮುಂದುವರೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಸಿಎಂ ಡಿಕೆ ಶಿವಕುಮಾರ್ ಮನವೊಲಿಕೆಗೂ ಬಗ್ಗದ ಆಶಾ ಕಾರ್ಯಕರ್ತೆಯರು ಧರಣಿ ಮುಂದುವರಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ ಇನ್ನೇನು ಎಲ್ಲವೂ ಅಂತ್ಯವಾಯ್ತು ಎನ್ನುವಷ್ಟರಲ್ಲಿ ಸರ್ಕಾರಕ್ಕೆ ಮತ್ತೆ ಶಾಕ್ ಕೊಟ್ಟಿದ್ದಾರೆ.































































