ಡಿ.‌ ದೇವರಾಜ ಅರಸು 111ನೇ ಜನ್ಮ‌ ದಿನಾಚರಣೆ

ಕಾರ್ಕಳ : ಭೂ ಸುಧಾರಣೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದೊಂದಿಗೆ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ ಡಿ. ದೇವರಾಜ ಅರಸು ಅವರನ್ನು ಸದಾ ಸ್ಮರಿಸುವ ಕಾರ್ಯವಾಗಬೇಕೆಂದು ಕಾರ್ಕಳ ತಹಶೀಲ್ದಾರ್‌ ಪ್ರದೀಪ್‌ ಆರ್.‌ ಹೇಳಿದರು.

ಅವರು ಜಿಲ್ಲಾ ಪಂಚಾಯತ್, ಕಾರ್ಕಳ ತಾಲೂಕು ಪಂಚಾಯತ್, ತಾಲೂಕು ಆಡಳಿತ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆ. 20ರಂದು ಕಾರ್ಕಳ ಡಿ. ದೇವರಾಜ ಅರಸು ಭವನದಲ್ಲಿ ನಡೆದ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ‌ ಸಾಮಾಜಿಕ,‌ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸಿದ ಮಹಾನ್ ಚೇತನ ಅರಸು ಅವರ ಆಶಯ, ಆದರ್ಶ ನಮಗೆಲ್ಲ ದಾರಿದೀಪವಾಗಬೇಕು ಎಂದು ತಹಶೀಲ್ದಾರ್‌ ಹೇಳಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ತಮ್ಮ ಕಾರ್ಯದಿಂದಾಗಿ ಇಂದಿಗೂ ಜನಮಾನಸದಲ್ಲಿ ನೆಲೆಯೂರಿದ್ದಾರೆ ಎಂದರು.

ಜಾತಿಗಿಂತ ನೀತಿಗೆ ಪ್ರಾಧ್ಯಾನ್ಯತೆ ನೀಡಿದ ಮಾನವತಾವಾದಿ – ಪ್ರಭಾಕರ್ ಕೊಂಡಳ್ಳಿ ‌
ಅರಸು ವಿಚಾರಧಾರೆಗಳ ಕುರಿತು ಉಪನ್ಯಾಸ ನೀಡಿದ ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಜಾತಿಗಿಂತ ನೀತಿಗೆ ಪ್ರಾಧ್ಯಾನ್ಯತೆ ನೀಡಿದ ದೇವರಾಜ ಅರಸು ಅವರು ನಾಡು ಕಂಡ ಶ್ರೇಷ್ಠ ರಾಜಕಾರಣಿ, ಅಪ್ಪಟ ಮಾನವತವಾದಿ. ಅವರ ಜನ್ಮದಿನಾಚರಣೆ‌ ಮೂಲಕ ಅವರ ಮೌಲ್ಯಗಳ‌‌‌ನ್ನು ಪಸರಿಸುವ ಕಾರ್ಯವಾಗುತ್ತಿದೆ. ಅರಸು ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿತ್ವ ತಮ್ಮದಾಗಿಸಿಕೊಳ್ಳಬೇಕೆಂದರು.

ಅಭಿನಂದನೆ
2025 -26ನೇ ಶೈಕ್ಷಣಿಕ ಸಾಲಿನ ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ತಾಲೂಕಿನ ವಸತಿ ನಿಲಯದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಂಗವಾಗಿ ನಿಲಯದ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ‌ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ‌ ವಿತರಿಸಲಾಯಿತು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ.ಎಸ್.‌ ಕುಂಬಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ‌, ಕಾರ್ಮಿಕ ಇಲಾಖೆಯ ನವೀನ್, ಕೃಷಿ ಇಲಾಖೆಯ ಕೃಷ್ಣ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು, ವಸತಿ ನಿಲಯದ‌ ಮೇಲ್ವಿಚಾರಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಸೃಷ್ಠಿ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ವಸತಿ ನಿಲಯ ಮೇಲ್ವಿಚಾರಕಿ ಮೇಘಾಶ್ರೀ ಎನ್. ಪಿ. ಕಾರ್ಯಕ್ರಮ ನಿರೂಪಿಸಿದರು.





























































































































error: Content is protected !!
Scroll to Top