ಘನತ್ಯಾಜ್ಯ ನಿರ್ವಹಿಸದ ಮಾಲ್‌, ಹೊಟೇಲ್‌ಗಳಿಗೆ ವಿದ್ಯುತ್, ನೀರು ಸಂಪರ್ಕ ಕಡಿತ : ಸುಪ್ರೀಂ ಕೋರ್ಟ್ ಆದೇಶ

ದೆಹಲಿ : ಘನತ್ಯಾಜ್ಯ ನಿರ್ವಹಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ, ಅದು ಕೇವಲ ನೈರ್ಮಲ್ಯ ಕಾರ್ಮಿಕರ ಹೊಣೆಗಾರಿಕೆಯಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸದ ದೊಡ್ಡ ಮಾಲ್‌ಗಳು, ಹೊಟೇಲ್‌ಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ದೊಡ್ಡ ವಸತಿ ಸಂಘಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ನಿಯಮ ಪಾಲಿಸದ ಬೃಹತ್ ತ್ಯಾಜ್ಯ ಉತ್ಪಾದಕರನ್ನು ಆರು ವಾರಗಳೊಳಗೆ ಗುರುತಿಸಬೇಕು. ನಿಯಮ ಪಾಲನೆಗೆ ವಿಫಲವಾದರೆ ಅವರ ನೀರು ಅಥವಾ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಬಹುದು. ಆದೇಶ ಪಾಲಿಸಿದ ಪ್ರಮಾಣಪತ್ರ ಸಲ್ಲಿಸಿದ ಬಳಿಕವೇ ಸಂಪರ್ಕವನ್ನು ಪುನಃ ಕಲ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್‌.ವಿ‌.ಎನ್‌. ಭಟ್ಟಿ ಮತ್ತು ಎನ್‌.ವಿ‌. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಘನತ್ಯಾಜ್ಯ ನಿರ್ವಹಣಾ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಮಾರ್ಗಸೂಚಿಗಳನ್ನು ಹೊರಡಿಸಿತು. ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕನು ತ್ಯಾಜ್ಯವನ್ನು ನಿಗದಿತ ರೀತಿಯಲ್ಲಿ ವಿಂಗಡಿಸಿ, ಸುರಕ್ಷಿತವಾಗಿ ಸಂಗ್ರಹಿಸಿ ಹಾಗೂ ಹಸ್ತಾಂತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿತು.

ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅಡಿಯಲ್ಲಿ ಪುರಸಭೆ ನಿಗಮಗಳ ಪರಿಸರ ಅನುಸರಣೆಗೆ ಸಂಬಂಧಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಗಳ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಪೀಠ ವಿಚಾರಣೆ ನಡೆಸುತ್ತಿತ್ತು.

ಭೋಪಾಲ್ ಮುನ್ಸಿಪಲ್ ಕಾರ್ಪೊರೇಷನ್, ಪುರಸಭೆಯ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ತನ್ನ ಬಾಧ್ಯತೆಗಳ ಕುರಿತು ನೀಡಿದ್ದ ಆದೇಶವನ್ನು ಪ್ರಶ್ನಿಸಿತ್ತು. ಸಮಸ್ಯೆಯ ಅಗಾಧತೆಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಬಳಿಕ ವಿಚಾರಣೆಯ ವ್ಯಾಪ್ತಿಯನ್ನು ದೇಶದಾದ್ಯಂತ ವಿಸ್ತರಿಸಿತು.

‘ಘನತ್ಯಾಜ್ಯ ನಿರ್ವಹಣೆಯ ಪರಿಣಾಮವನ್ನು ಮಿತಿಗೊಳಿಸಲು ಹಾಗೂ ತ್ಯಾಜ್ಯ ಉತ್ಪಾದನೆಯನ್ನು ನಿಯಂತ್ರಿಸಲು ನನಗೆ ಹಕ್ಕಿದೆ, ಆದರೆ ಸಹಕರಿಸುವ ಅಗತ್ಯವಿಲ್ಲ’ ಎಂಬ ಮನೋಭಾವ ಸಮಾಜದಲ್ಲಿ ಇರುವುದು ವಿಷಾದಕರ ಎಂದು ಪೀಠ ಹೇಳಿತು.

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಮೂಲಕ ಜಿಲ್ಲಾಧಿಕಾರಿಗಳು ತಮ್ಮ ಪ್ರದೇಶಗಳಲ್ಲಿರುವ ಬೃಹತ್ ತ್ಯಾಜ್ಯ ಉತ್ಪಾದಕರನ್ನು ಗುರುತಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣಾ ಸಮಿತಿಗೆ ನಿರ್ದೇಶಿಸಲಾಯಿತು. ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸುವ ಅಗತ್ಯದ ಕುರಿತು ಈ ಸಂಸ್ಥೆಗಳಿಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿತು.

ಡಿಜಿಟಲ್ ಮೇಲ್ವಿಚಾರಣೆ
ತ್ಯಾಜ್ಯ ನಿರ್ವಹಣೆಯ ಮೇಲ್ವಿಚಾರಣೆಗೆ ಡಿಜಿಟಲ್ ವಿಧಾನಗಳನ್ನು ಬಳಸುವ ಅಗತ್ಯವನ್ನು ನ್ಯಾಯಮೂರ್ತಿಗಳು ಒತ್ತಿ ಹೇಳಿದರು. ತ್ಯಾಜ್ಯ ಡಂಪ್‌ ಗಳ ಜಿಯೋ-ಟ್ಯಾಗ್ ಮಾಡಲಾದ ಫೊಟೋಗಳು ಮತ್ತು ಮಾಸಿಕ ಅನುಸರಣಾ ವರದಿಗಳನ್ನು ಮೀಸಲಾದ ಪೋರ್ಟಲ್ ಮೂಲಕ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿತು.

ಮೇಲ್ವಿಚಾರಣಾ ಸಮಿತಿಯು ರೈಲ್ವೆ, ರಕ್ಷಣಾ ಇಲಾಖೆ, ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಇತರ ಕೇಂದ್ರ ಸಚಿವಾಲಯಗಳು ಪಾಲಿಸುವುದನ್ನು ಪರಿಶೀಲಿಸಬೇಕು. ಪುರಸಭೆಯ ಘನತ್ಯಾಜ್ಯದಿಂದ ನದಿಗಳಲ್ಲಿ ಉಂಟಾಗುವ ನೀರಿನ ಮಾಲಿನ್ಯದ ಮೇಲೂ ನಿರ್ದಿಷ್ಟವಾಗಿ ಗಮನಹರಿಸಿ, ಸಂಬಂಧಿತ ದತ್ತಾಂಶವನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕು ಎಂದು ನಿರ್ದೇಶಿಸಲಾಯಿತು.

ಶಾಲೆ, ಕಾಲೇಜುಗಳಿಗೂ ಜವಾಬ್ದಾರಿ
ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಗಳು ತಮ್ಮ ಪಠ್ಯಕ್ರಮ ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಕುರಿತು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಶಿಕ್ಷಣವನ್ನು ತಕ್ಷಣ ಅಳವಡಿಸಿಕೊಳ್ಳಬೇಕು ಎಂದು ಪೀಠ ಸೂಚಿಸಿತು.
ಶಿಕ್ಷಕರಿಗೆ ತರಬೇತಿ ನೀಡಬೇಕು. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಮನೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ವಹಿಸಬೇಕು ಎಂದು ನ್ಯಾಯಾಲಯ ಹೇಳಿತು.





























































































































error: Content is protected !!
Scroll to Top