ಹೆಬ್ರಿ ಕಸಾಪ – ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ : ಕನ್ನಡ ವಿಷಯದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕ ಹಾಗೂ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ ಇವರ ಜಂಟಿ ಆಶ್ರಯದಲ್ಲಿ ಜೂನ್ 18ರಂದು ಹೆಬ್ರಿಯ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎಸ್ಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ ಪೂರ್ಣ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.

ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾಧ್ಯಮ ಯಾವುದೇ ಇದ್ದರೂ ವಿದ್ಯಾರ್ಥಿಗಳು ನಮ್ಮ ನಾಡ ಭಾಷೆ ಕನ್ನಡದ ಮೇಲಿನ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮತ್ತಷ್ಟು ಬೆಳೆಯಬೇಕು. ಕನ್ನಡವು ಹೃದಯದ ಭಾಷೆಯಾಗಿದ್ದು, ಅದು ಮಾತನಾಡಲು ಸರಾಗ ಮತ್ತು ಸರಳವಾಗಿದೆ ಎಂದು ಹೇಳಿದರು.

ಆಶಯ ನುಡಿಗಳನ್ನಾಡಿದ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಭಾಷೆಯಲ್ಲಿ ಪೂರ್ಣ ಅಂಕಗಳನ್ನು ಪಡೆಯುವುದು ಸುಲಭದ ಮಾತಲ್ಲ. ಆದ್ದರಿಂದ ಅಂತಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುತ್ತಿರುವ ಹೆಬ್ರಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಪೂರ್ಣಾಂಕ ಪಡೆದ 18 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಸಾಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ತಾಲೂಕು ಆರನೆಯ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಶೇಡಿಮನೆಯ ಸುಧಾಕರ್ ಶೆಟ್ಟಿ, ಕಾರ್ಯಾಧ್ಯಕ್ಷ ಶಂಕರ ಪೂಜಾರಿ ಶೇಡಿಮನೆ, ಜಿಲ್ಲಾ ಮಾಧ್ಯಮ ಪ್ರತಿನಿಧಿ ನರಸಿಂಹಮೂರ್ತಿರಾವ್, ಉಪನ್ಯಾಸಕ ದೀಪಕ್ ಎನ್. ಉಪಸ್ಥಿತರಿದ್ದರು. ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಕನ್ನಡ ಭಾಷಾ ಉಪನ್ಯಾಸಕ ದೀಪಕ್ ಎನ್. ಸ್ವಾಗತಿಸಿದರು. ಕಸಾಪ ಹೆಬ್ರಿ ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ ಕಾರ್ಯಕ್ರಮ ನಿರೂಪಿಸಿ, ಪದಾಧಿಕಾರಿ ಮಹೇಶ ಹೈಕಾಡಿ ವಂದಿಸಿದರು.

















































error: Content is protected !!
Scroll to Top