ಇಂಡಿಯನ್ ಈಸ್‌ಮೆಂಟ್ ಆಕ್ಟ್ – 1882 (ಭಾರತೀಯ ಸರಾಗಗೊಳಿಸುವ ಕಾಯ್ದೆ – 1882) ಎಂಬ ಕಾನೂನು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಅತ್ಯಂತ ಹಳೆಯದಾದ ಆದರೆ ಬಹಳ ಪ್ರಾಮುಖ್ಯವಾದ ಕಾನೂನುಗಳ ಪೈಕಿ ಒಂದಾಗಿರುತ್ತದೆ. ಈ ಕಾನೂನಿನ ಪ್ರಕಾರ ಒಂದು ಆಸ್ತಿಯ ಮಾಲಿಕರು ತನ್ನ ಸ್ವಂತ ಜಮೀನಿನ ಪ್ರಯೋಜನಕ್ಕಾಗಿ ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರಕ್ಕೆ ಒಳಪಟ್ಟು ಪಕ್ಕದ ಅಂದರೆ ನೆರೆಕರೆಯವರ ಮಾಲೀಕತ್ವದ ಜಮೀನನ್ನು ನೀರು, ದಾರಿ, ಗಾಳಿ ಮತ್ತು ಬೆಳಕು ಇತ್ಯಾದಿಗಳನ್ನು ತನ್ನ ಭೂಮಿಯ ಪ್ರಯೋಜನಕ್ಕಾಗಿ ಬಳಸಿಕೊಳ್ಳುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾನೆ. ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ಮಾಲೀಕತ್ವದ ಹಕ್ಕಿನ ಮನೆ ಅಥವಾ ಸ್ಥಳದಿಂದ ತನ್ನ ದೈನಂದಿನ ಚಟುವಟಿಕೆಗಳಿಗಾಗಿ ಅನಾದಿಕಾಲದಿಂದ ಅಂದರೆ ಕನಿಷ್ಟ 20 ವರ್ಷ ಮೇಲ್ಪಟ್ಟು ನೆರೆಕರೆಯ ವ್ಯಕ್ತಿಗೆ ಸಂಬಂಧಪಟ್ಟ ಜಮೀನಿನ ಮೂಲಕ ಸಾರ್ವಜನಿಕ ರಸ್ತೆಗೆ ಹೋಗಿ ಬರುವ ಸಂದರ್ಭದಲ್ಲಿ ಆತನನ್ನು ತಡೆಯುವ ಅಥವಾ ಆತನು ನಿರಂತರವಾಗಿ ಉಪಯೋಗಿಸಿಕೊಂಡು ಬರುತ್ತಿರುವ ರಸ್ತೆಗೆ ಅಡ್ಡಿ, ಆತಂಕ ಉಂಟುಮಾಡುವ ಅಧಿಕಾರವನ್ನು ನೆರೆಕರೆಯ ಜಮೀನಿನ ಮಾಲಿಕನು ಹೊಂದಿರುವುದಿಲ್ಲ. ಇದೇ ರೀತಿಯಾಗಿ ಅನಾದಿ ಕಾಲದಿಂದ ಅಂದರೆ ಕನಿಷ್ಟ 20 ವರ್ಷ ಮೇಲ್ಪಟ್ಟು ಒಬ್ಬ ವ್ಯಕ್ತಿ ತನ್ನ ಅಥವಾ ತನ್ನ ಮನೆಯವರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಥವಾ ತನ್ನ ಕೃಷಿ ಚಟುವಟಿಕೆಗಾಗಿ ನೆರೆಕರೆಯ ಜಮೀನಿನಲ್ಲಿರುವ ಬಾವಿ, ಕೆರೆ ಅಥವಾ ಇತರ ನೀರಿನ ಆಶ್ರಯವನ್ನು ನಿರಂತರವಾಗಿ ಉಪಯೋಗಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಅಥವಾ ತನ್ನ ಜಮೀನಿನ ಕೃಷಿ ಉದ್ದೇಶಕ್ಕಾಗಿ ಸರಕಾರಿ ಅಥವಾ ಇತರ ಖಾಸಗಿ ಮೂಲಗಳಿಂದ ನೆರೆಕರೆಯ ಜಮೀನಿನ ಮೂಲಕ ಹಾದು ಬರುವ ನೀರಿನ ತೋಡಿನ ಮೂಲಕ ತನ್ನ ಜಮೀನಿಗೆ ನೀರನ್ನು ಉಪಯೋಗಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ನೆರೆಕರೆಯ ಭೂ ಮಾಲಿಕ ಯಾವುದೇ ರೀತಿಯ ಅಡ್ಡಿ ಆತಂಕ ಮಾಡಕೂಡದಾಗಿರುತ್ತದೆ.
ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಯಾವ ಆಸ್ತಿಯ ಮಾಲಿಕನಿಗೆ ತನ್ನ ಜಮೀನಿನ ಉಪಯೋಗಕ್ಕಾಗಿ ಮತ್ತೊಬ್ಬನ ಜಮೀನನ್ನು ಬಳಸುವ ಹಕ್ಕು ಇರುತ್ತದೆಯೋ ಅಂತಹ ಮಾಲಕನ ಆಸ್ತಿಯನ್ನು ಪ್ರಬಲ ಭೂಮಿ (ಡೋಮಿನೆಂಟ್ ಹೆರಿಟೇಜ್) ಎಂಬುದಾಗಿಯೂ ಹಾಗೂ ಯಾವ ಭೂಮಿಯ ಮೂಲಕ ಅಂದರೆ ನೆರೆಕರೆಯ ಭೂಮಿಯ ಮೂಲಕ ಪ್ರಬಲ ಭೂಮಿಯ ಮಾಲಿಕನು ತನ್ನ ಹಕ್ಕನ್ನು ಚಲಾಯಿಸ ಬಯಸುತ್ತಾನೋ ಅಂತಹ ಭೂಮಿಯನ್ನು ಸೇವಾ ಭೂಮಿ (ಸರ್ವಿಯೆಂಟ್ ಹೆರಿಟೇಜ್) ಎಂದು ಪರಿಗಣಿಸಲಾಗುತ್ತದೆ. ಈ ಕಾನೂನಿನ ಪ್ರಕಾರ ಪ್ರಬಲ ಭೂಮಿಯ ಮಾಲಿಕನು ತನ್ನ ಜಮೀನಿಗೆ ಅಥವಾ ತನ್ನ ಮನೆಗೆ ಹೋಗಿ ಬರಲು ಬೇರೆ ಯಾವುದೇ ದಾರಿ ಅಥವಾ ರಸ್ತೆಯ ವ್ಯವಸ್ಥೆ ಇಲ್ಲದಿದ್ದಲ್ಲಿ ಪಕ್ಕದ ಜಮೀನಿನ ಅಂದರೆ ಸೇವಾ ಭೂಮಿ (ಸರ್ವಿಯೆಂಟ್ ಹೆರಿಟೇಜ್)ನಲ್ಲಿ ಇರುವ ಅಥವಾ ಅಂತಹ ಆಸ್ತಿಯ ಮೂಲಕ ಕಾಲುದಾರಿ ಅಥವಾ ವಾಹನದ ದಾರಿಯನ್ನು ಉಪಯೋಗಿಸಿಕೊಂಡು ಬರುವ ಹಕ್ಕನ್ನು ಹೊಂದಿರುತ್ತಾನೆ. ಸೇವಾ ಭೂಮಿ (ಸರ್ವಿಯೆಂಟ್ ಹೆರಿಟೇಜ್) ಯಲ್ಲಿರುವ ಕಟ್ಟಡದ ಕಿಟಕಿ ಅಥವಾ ದ್ವಾರಗಳ ಮೂಲಕ ಸರಿಯಾದ ಗಾಳಿ ಮತ್ತು ಬೆಳಕನ್ನು ಅನುಭವಿಸುವ ಕಾನೂನುಬಧ್ಧ ಹಕ್ಕನ್ನು ಅದರ ಮಾಲಿಕ ಹೊಂದಿರುತ್ತಾನೆ. ಈ ರೀತಿಯ ಹಕ್ಕನ್ನು ಚಲಾಯಿಸುವ ಸಂದರ್ಭದಲ್ಲಿ ನೆರೆಕರೆಯ ಜಮೀನಿನ ಮಾಲಿಕರು ಅಂದರೆ ಸೇವಾ ಭೂಮಿ (ಸರ್ವಿಯೆಂಟ್ ಹೆರಿಟೇಜ್) ನ ಮಾಲಿಕನು ಯಾವುದೇ ಅಡ್ಡಿ ಆತಂಕ ಮಾಡುವಂತಿಲ್ಲ.
ಮೇಲ್ಕಾಣಿಸಿದ ಕಾಯ್ದೆಯ ಪ್ರಕಾರ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಯಾವುದೇ ಆಸ್ತಿಯನ್ನು ಅಥವಾ ಅದರ ಮೇಲಿನ ಹಕ್ಕನ್ನು ನಿರ್ದಿಷ್ಟ ಸಮಯ ಮತ್ತು ಉದ್ದೇಶಕ್ಕಾಗಿ ಬಳಸಿಕೊಳ್ಳಲು ನೀಡುವ ಅನುಮತಿಯನ್ನು ಪರವಾನಗಿ (ಲೈಸೆನ್ಸ್) ಎನ್ನಲಾಗುತ್ತದೆ. ಈ ರೀತಿಯ ಅನುಮತಿಯು ಕೇವಲ ತಾತ್ಕಾಲಿಕ ಅನುಮತಿಯಾಗಿದ್ದು ಅನುಮತಿ ಪಡೆಯುವ ವ್ಯಕ್ತಿ ತಾನು ಉಪಯೋಗಿಸುವ ಆಸ್ತಿಯ ಮೇಲೆ ಹಕ್ಕನ್ನು ಹೊಂದುವುದಿಲ್ಲ. ಯಾವುದೇ ಭೂ ಮಾಲಿಕನು ತಾನು ಹೊಂದುವ ದಾರಿ, ನೀರು, ಗಾಳಿ ಮತ್ತು ಬೆಳಕು ಇತ್ಯಾದಿ ಹಕ್ಕುಗಳನ್ನು ಶಾಂತಿಯುತವಾಗಿ ಮತ್ತು ನಿರಾತಂಕವಾಗಿ ಅನುಭವಿಸುವ ಸಂದರ್ಭದಲ್ಲಿ ನೆರೆಕರೆಯ ಭೂಮಿಯ ಮಾಲಿಕನು ಅಡ್ಡಿ ಅಡಚಣೆ ಉಂಟು ಮಾಡಿದ ಅಥವಾ ಈ ರೀತಿಯ ಬೆದರಿಕೆ ಒಡ್ಡುವ ಯಾವುದೇ ವ್ಯಕ್ತಿ ವಿರುದ್ಧ ಸೂಕ್ತ ತಡೆಯಾಜ್ಞೆಯನ್ನು ನೀಡುವ ಕಾನೂನುಬದ್ಧ ಅಧಿಕಾರವನ್ನು ಸಂಬಂಧಪಟ್ಟ ವ್ಯಾಪ್ತಿ ಪ್ರದೇಶದ ಸಿವಿಲ್ ನ್ಯಾಯಾಲಯವು ಹೊಂದಿರುತ್ತದೆ.












