ನೈಜ ಆರ್. ಹೆಗ್ಡೆ ಭಾರತೀಯ ವಾಲಿಬಾಲ್‌ ತಂಡಕ್ಕೆ ಆಯ್ಕೆ

ಉಡುಪಿ : ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ ನೈಜ ಆರ್. ಹೆಗ್ಡೆ ರಾಷ್ಟ್ರೀಯ ಸ್ಕೂಲ್‌ ಗೇಮ್ಸ್ ಫೆಡರೇಷನ್‌ ನಡೆಸುವ 2026ನೇ ಸಾಲಿನ 18ರ ವಯೋಮಿತಿಯ ಬಾಲಕಿಯರ ವಿಭಾಗದ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಭಾರತೀಯ ವಾಲಿಬಾಲ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಭಾರತೀಯ ತಂಡಕ್ಕೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಒಟ್ಟು 24 ಕ್ರೀಡಾಪಟುಗಳು ಆಯ್ಕೆಯಾಗಿದ್ದು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಇಬ್ಬರಲ್ಲಿ ಮಣಿಪಾಲ ಜ್ಞಾನಸುಧಾದ ನೈಜ ಆರ್. ಹೆಗ್ಡೆ ಕೂಡಾ ಒಬ್ಬರಾಗಿದ್ದರು. ಇದೀಗ ಭಾರತೀಯ ವಾಲಿಬಾಲ್‌ ತಂಡದ ಆಯ್ಕೆಯ ತರಬೇತಿಯಲ್ಲಿ ಕರ್ನಾಟಕದಿಂದ ನೈಜ ಆಯ್ಕೆಯಾಗಿದ್ದಾರೆ. ಜು. 1ರಿಂದ 10 ರವರೆಗೆ ಚೀನಾದ ಶಾಂಗ್ಲೋದಲ್ಲಿ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ ನಡೆಯಲಿದೆ.

ಇವರು 2025-26ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ವತಿಯಿಂದ ನಡೆದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇಕಡ 95 ಅಂಕಗಳನ್ನು ಪಡೆಯುವುದರೊಂದಿಗೆ ಪ್ರಸ್ತುತ ನ್ಯಾಷನಲ್ ಸೆಂಟರ್‌ ಆಫ್‌ಎಕ್ಸಲೆನ್ಸ್‌ಗೆ ಆಯ್ಕೆಯಾಗಿದ್ದು ಖೇಲೋ ಇಂಡಿಯಾ ಅಕಾಡೆಮಿಯಲ್ಲಿ ಉಚಿತ ಕ್ರೀಡಾ ತರಬೇತಿ ಮತ್ತು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.
ಇವರು ಉಡುಪಿ ತಾಲೂಕಿನ ಕುಕ್ಕೆಹಳ್ಳಿ ರಾಜೇಶ್ ಹೆಗ್ಡೆ ಹಾಗೂ ಸಂಧ್ಯಾ ಕುಮಾರಿ ಶೆಟ್ಟಿಯವರ ಪುತ್ರಿ.































error: Content is protected !!
Scroll to Top