ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿದಾಗ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ – ರಶ್ಮಿ ಎಸ್. ಆರ್.
ಕಾರ್ಕಳ : ಪಠ್ಯ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವೆಂದು ಕುಂದಾಪುರ ವಿಭಾಗ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಅಭಿಪ್ರಾಯಪಟ್ಟರು.
ಅವರು ಜೂ. 19ರಂದು ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ನಮ್ಮಲ್ಲಿ ಲವಲವಿಕೆ, ಖುಷಿ ಅಗತ್ಯ ಎಂದ ಅವರು ವಿದ್ಯಾರ್ಥಿ ಜೀವನ ಹಾಗೂ ಕರ್ತವ್ಯದಲ್ಲಿಯೂ ಇದನ್ನು ಅಳವಡಿಸಬೇಕೆಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆದಿಂಜೆ ಕೂಟಾಯಿ ಸೂರ್ಯಕಾಂತ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಬಾಲಚಂದ್ರ ಶೆಟ್ಟಿ, ವೆಂಕಟರಾಯ ಕಾಮತ್, ಮೋಹನದಾಸ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಹಾಸ್ ಹೆಗ್ಡೆ, ಆಲ್ವಿನ್ ನೇರಿ ಪಿಂಟೋ, ಸುಕುಮಾರ ಶೆಟ್ಟಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಾಲ್, ಉಪನ್ಯಾಸಕ ವಿಜಯ ಕುಮಾರ್, ವಿದ್ಯಾರ್ಥಿ ನಾಯಕರಾದ ಪ್ರೇರಣ್, ದಶಮಿ ಉಪಸ್ಥಿತರಿದ್ದರು. ಪ್ರಾಚಾರ್ಯ ವಿನ್ಸೆಂಟ್ ಡಿಸೋಜಾ ಸ್ವಾಗತಿಸಿದರು. ವಿಜಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಮಾಧವ ಕಾರ್ಯಕ್ರಮ ನಿರೂಪಿಸಿದರು.















