ಜೂ. 21ರಂದು ನೀಟ್ ಮರು ಪರೀಕ್ಷೆ – ಲೋಪವಿಲ್ಲದೇ ನಡೆಸುವಂತೆ ಡಿಸಿ ಸೂಚನೆ

ಜಿಲ್ಲೆಯಲ್ಲಿ 6 ಪರೀಕ್ಷಾ ಕೇಂದ್ರ – 2970 ವಿದ್ಯಾರ್ಥಿಗಳು ನೋಂದಣಿ

ಉಡುಪಿ : ಜಿಲ್ಲೆಯಲ್ಲಿ ಜೂ. 21 ರಂದು ನಡೆಯಲಿರುವ ನೀಟ್ (ಯುಜಿ) ಮರು ಪರೀಕ್ಷೆಯಲ್ಲಿ ಯಾವುದೇ ಲೋಪವಿಲ್ಲದೇ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜೂ. 18ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನೀಟ್ ಮರು ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಂಬಂಧ ಆಯೋಜಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ನೀಟ್ ಮರು ಪರೀಕ್ಷೆಯು ಜೂ. 21 ರಂದು ಜಿಲ್ಲೆಯ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ 938 ಬಾಲಕರು, 2032 ಬಾಲಕಿಯರು, 7 ಪಿಡಬ್ಲ್ಯೂ ಬಿ.ಡಿ ಅಭ್ಯರ್ಥಿಗಳು ಹಾಗೂ 1 ಸ್ಕ್ರೈಬ್ ಸೌಲಭ್ಯ ಪಡೆದಿರುವ ಅಭ್ಯರ್ಥಿಗಳು ಸೇರಿದಂತೆ ಒಟ್ಟು 2970 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಪರೀಕ್ಷಾ ಕಾರ್ಯವನ್ನು ನಡೆಸಬೇಕು. ವಿದ್ಯಾರ್ಥಿಗಳು ಯಾವುದೇ ರೀತಿಯ ಗೊಂದಲವಾಗದಂತೆ ನಿರಾಳವಾಗಿ ಪರೀಕ್ಷೆ ಬರೆಯಲು ಪೂರಕ ವಾತಾವರಣ ನಿರ್ಮಿಸಬೇಕು ಎಂದರು.

ನೀಟ್ ಮರು ಪರೀಕ್ಷೆಯು ಜೂ. 21 ರಂದು ಮಧ್ಯಾಹ್ನ 2 ರಿಂದ ಸಂಜೆ 5.15 ರ ವರೆಗೆ ನಡೆಯಲಿದೆ. ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 15 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿದೆ. ವಿಕಲಚೇತನ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಒಂದು ಗಂಟೆ ಹೆಚ್ಚುವರಿ ಸಮಯಾವಕಾಶ ಇರಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ವರೆಗೆ ವಿದ್ಯಾರ್ಥಿಗಳ ಪರಿಶೋಧನೆ ಕಾರ್ಯವನ್ನು ನಡೆಸಿ, ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಿಗೆ ತೆರಳಲು ಅನುವು ಮಾಡಿಕೊಡಲಾಗುವುದು. ನಂತರ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದರು.

ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್‌, ಕ್ಯಾಲ್ಕುಲೇಟರ್, ಬ್ಲೂ ಟೂತ್ ಡಿವೈಸ್, ಇಯರ್ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ವಾಲೆಟ್ಸ್, ಹ್ಯಾಂಡ್ ಬ್ಯಾಗ್ ಧರಿಸುವುದು ನಿಷೇಧಿಸಲಾಗಿದೆ ಎಂದ ಡಿಸಿಯವರು, ಪರೀಕ್ಷೆಗಳು ಆರಂಭವಾಗುವ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿ ವಿದ್ಯಾರ್ಥಿಗಳು ಕೇಂದ್ರದಲ್ಲಿ ಹಾಜರಿರಬೇಕು ಹಾಗೂ ತಮ್ಮ ಪರೀಕ್ಷಾ ಪ್ರವೇಶ ಪತ್ರದ ಜೊತೆ ಯಾವುದಾದರೊಂದು ಮೂಲ (ಒರಿಜಿನಲ್) ಗುರುತಿನ ಚೀಟಿಯೊಂದಿಗೆ (ಕಾಲೇಜಿನ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಮತ್ತಿತರ ಮೂಲಪ್ರತಿ) ಸೂಚನೆಯಲ್ಲಿ ತಿಳಿಸಿರುವಂತೆ 2 ಭಾವಚಿತ್ರಗಳೊಂದಿಗೆ ಪರೀಕ್ಷೆಗೆ ಹಾಜರಿರಬೇಕು ಎಂದರು.

ನೀಟ್ ಮರುಪರೀಕ್ಷೆ ಸಂಬಂಧ ನಿಯೋಜಿಸಲಾದ ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದರೊಂದಿಗೆ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವುದೇ ಸಣ್ಣ ಲೋಪಕ್ಕೂ ಅವಕಾಶ ನೀಡದಂತೆ ಅಧಿಕಾರಿಗಳು ಹೆಚ್ಚು ಮಾರ್ಗಸೂಚಿಯನ್ವಯ ಜಾಗರೂಕರಾಗಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಂದರು.

ನೀಟ್ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಉಡುಪಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎನ್. ಕರೀಂ ಖಾನ್ ಮಾತನಾಡಿ, ನೀಟ್ ಮರು ಪರೀಕ್ಷೆಯು ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಾದ ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕೋಟ ವಿವೇಕ ಪಿ.ಯು. ಕಾಲೇಜು, ಉಡುಪಿಯ ಎಂ.ಜಿ.ಎಂ. ಪಿಯು ಕಾಲೇಜು, ಉಡುಪಿಯ ಸರಕಾರಿ ಪಿ.ಯು ಬೋರ್ಡ್, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಕಡೆಯಿಂದ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಪ್ರಿಸ್ಕಿಂಗ್ ನಡೆಸಲಾಗುವುದು. ಬಯೋಮೆಟ್ರಿಕ್ ದೃಢೀಕರಣದ ನಂತರವೇ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪರೀಕ್ಷೆ ಮುಗಿದ ನಂತರ ಓ.ಎಂ.ಆರ್. ಶೀಟ್‌ಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ಮಾರ್ಗಸೂಚಿಯನುಸಾರ ಕ್ರಮ ವಹಿಸಬೇಕೆಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ನೀಟ್ ಪರೀಕ್ಷೆಯ ಡೆಪ್ಯೂಟಿ ಸಿಟಿ ಕೋ-ಆರ್ಡಿನೇಟರ್ ಆದ ಕೇಂದ್ರೀಯ ವಿದ್ಯಾಲಯದ ಶಿಕ್ಷಕ ವಸಂತ ಪದ್ಮಶಾಲಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

























error: Content is protected !!
Scroll to Top