ಕಾರ್ಕಳ : ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾಗಿ ಗುತ್ತಿಗೆ ಆಧಾರದ ಮೇರೆಗೆ ಡಾ. ಸಾಹಿತಿರಮ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ಡಾ. ಸಂದೀಪ್ ಕುಡ್ವ ತಿಳಿಸಿದ್ದಾರೆ.
ಕಾರ್ಕಳ ತಾಲೂಕಿನ ಸುಮಾರು 50 ಗ್ರಾಮಗಳ ಮಹಿಳೆಯರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಕಳೆದ ಮೂರು ವರ್ಷದ ಹಿಂದೆ ಗಣೇಶ್ ಭಟ್ ಎಂಬ ಹೆರಿಗೆ ತಜ್ಞರು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭ ತಿಂಗಳಿಗೆ ಸರಾಸರಿ 100ರಿಂದ 150ರಷ್ಟು ಹೆರಿಗೆಗಳಾಗುತ್ತಿದ್ದವು. ಕಾರ್ಕಳ ತಾಲೂಕಿನವರು ಮಾತ್ರವಲ್ಲದೇ ಬೆಳ್ತಂಗಡಿ, ಮೂಡುಬಿದಿರೆ, ಕಾಪು ಭಾಗದಿಂದಲೂ ಕಾರ್ಕಳ ಆಸ್ಪತ್ರೆಯತ್ತ ಬರುತ್ತಿದ್ದರು. ಗಣೇಶ್ ಭಟ್ ಅವರ ವರ್ಗಾವಣೆಯ ಬಳಿಕ ಸರಿಯಾದ ಹೆರಿಗೆ ತಜ್ಞರಿಲ್ಲದೆ ಹೆರಿಗೆ ದಾಖಲಾತಿಯ ಸಂಖ್ಯೆ ಇಳಿಮುಖವಾಗಿತ್ತು. ಹೆರಿಗೆ ತಜ್ಞರಿದ್ದರೂ ಅವರ ಉದಾಸೀನತೆ, ಸ್ಪಂದನೆಯಿಲ್ಲದಿರುವುದು ಮತ್ತು ಸರಿಯಾದ ಸಮಯಕ್ಕೆ ಬಾರದೆ ಇರುವ ಕಾರಣ ಹೆರಿಗೆಗಾಗಿ ಬಂದವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಯತ್ತ ಹೋಗುವ ಪರಿಸ್ಥಿತಿಯಿತ್ತು. ಖಾಸಗಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿಗೆ (ಆಸ್ಪತ್ರೆ ವೆಚ್ಚ ಹೊರತುಪಡಿಸಿ) ಸುಮಾರು 15 ಸಾವಿರದವರೆಗೆ ವೆಚ್ಚವಾಗುತ್ತದೆ. ಇದನ್ನು ಬಡಜನತೆಗೆ ಭರಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದರು. ಇದೀಗ ಇದಕ್ಕೆಲ್ಲಾ ಮುಕ್ತಿ ಎಂಬಂತೆ ಪ್ರಸೂತಿ ತಜ್ಞರ ನೇಮಕಾತಿಯಾಗಿದೆ.
























