ಹಣಕಾಸಿನ ವ್ಯವಹಾರ

ವಾಣಿಜ್ಯ ಕ್ಷೇತ್ರವು ಮುಂದುವರಿದಂತೆ ಸಾಲ ನೀಡುವಿಕೆಯ ಮತ್ತು ಸಾಲ ಪಡೆದುಕೊಳ್ಳುವಿಕೆಯ ವ್ಯವಹಾರವು ಸಮಾಜದಲ್ಲಿ ತ್ವರಿತಗತಿಯಿಂದ ಸಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜನಸಾಮಾನ್ಯರು ಅದರಲ್ಲೂ ಆರ್ಥಿಕವಾಗಿ ಬಳಲಿರುವ ಕೆಲವು ವ್ಯಕ್ತಿಗಳು ತಮ್ಮ ದೈನಂದಿನ ಖರ್ಚುವೆಚ್ಚಗಳಿಗಾಗಿ, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ಮದುವೆ ಮುಂತಾದ ಕೆಲವು ಅಗತ್ಯದ ಖರ್ಚುಗಳಿಗಾಗಿ ಅನಿವಾರ್ಯವಾಗಿ ಸಾಲವನ್ನು ಪಡೆಯಬೇಕಾದ ಸಂದರ್ಭದಲ್ಲಿ ಕೆಲವು ಅಸಹಾಯಕ ವ್ಯಕ್ತಿಗಳು ಸರಿಯಾಗಿ ಮುಂದಾಲೋಚನೆ ಮಾಡದೇ, ಸಾಲ ನೀಡುವ ಅಥವಾ ಲೇವಾದೇವಿ ವ್ಯವಹಾರ ನಡೆಸುವ ಖಾಸಗಿ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗೆ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ನೀಡಿ ಸಾಲ ಪಡಕೊಂಡು ಮುಂದಕ್ಕೆ ತೊಂದರೆಯನ್ನು ಅನುಭವಿಸುವುದನ್ನು ನಾವು ನೋಡುತ್ತಿರುತ್ತೇವೆ. ಸಾಲ ಪಡೆಯುವಾಗ ಸಹಿ ಮಾಡಿದ ಖಾಲಿ ಚೆಕ್ ನೀಡುವ ಹವ್ಯಾಸವು ಅತ್ಯಂತ ಅಪಾಯಕಾರಿಯಾಗಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಾನುಸಾರದಂತೆ ಯಾವುದೇ ಸಾಲಕ್ಕೆ ಸಹಿ ಮಾಡಿದ ಖಾಲಿ ಚೆಕ್ ನೀಡುವುದನ್ನು ಕಡ್ಡಾಯಗೊಳಿಸಿರುವುದಿಲ್ಲ. ಸಾಲ ನೀಡುವ ಸಂದರ್ಭದಲ್ಲಿ ಸಹಿ ಮಾಡಿದ ಖಾಲಿ ಚೆಕ್‌ನ್ನು ಪಡಕೊಳ್ಳುವುದು ವೈಯುಕ್ತಿಕ ವಿಚಾರವಾಗಿರುತ್ತದೆ. ಸಾಲ ಪಡೆಯುವಾಗ ಅಥವಾ ಇನ್ನಿತರ ಯಾವುದೇ ಸಂದರ್ಭದಲ್ಲಿ ಸಹಿ ಮಾಡಿರುವ ಖಾಲಿ ಚೆಕ್‌ನ್ನು ನೀಡುವುದರಿಂದ ಸಾಲ ನೀಡುವ ವ್ಯಕ್ತಿಗಳು, ಲೇವಾದೇವಿದಾರರು ಅಥವಾ ಸಹಿ ಮಾಡಿರುವ ಖಾಲಿ ಚೆಕ್‌ನ್ನು ಪಡೆಯುವ ವ್ಯಕ್ತಿಗಳು ಅಂತಹ ಖಾಲಿ ಚೆಕ್ಕಿನಲ್ಲಿ ತಮ್ಮ ಇಷ್ಟ ಪ್ರಕಾರ ದೊಡ್ಡ ಮೊತ್ತವನ್ನು ಬರೆದು ಹಣವನ್ನು ಡ್ರಾ ಮಾಡಿಕೊಳ್ಳುವ ಅಥವಾ ಅಗತ್ಯದ ಮೊತ್ತಕ್ಕಿಂತ ಜಾಸ್ತಿ ಹಣವನ್ನು ತುಂಬಿ ಸಹಿ ಮಾಡಿದ ಖಾಲಿ ಚೆಕ್‌ನ್ನು ದುರುಪಯೋಗ ಪಡಿಸಿಕೊಂಡು ಅದನ್ನು ನೀಡಿರುವ ವ್ಯಕ್ತಿಗೆ ಅನ್ಯಾಯ, ತೊಂದರೆ ಮತ್ತು ನಷ್ಟವನ್ನು ಉಂಟುಮಾಡುವ ಸಾದ್ಯತೆ ಹೆಚ್ಚಾಗಿರುತ್ತದೆ.

ಯಾವತ್ತೂ ನಾವು ಒಬ್ಬ ವ್ಯಕ್ತಿಗೆ ಅಥವಾ ಸಂಸ್ಥೆಗೆ ಚೆಕ್‌ನ್ನು ನೀಡುವ ಸಂಧರ್ಭದಲ್ಲಿ ಸದರಿ ಚೆಕ್ಕನ್ನು ಸಹಿ ಮಾಡುವ ಮುಂಚೆ ಚೆಕ್ ಪಡಕೊಳ್ಳುವ ವ್ಯಕ್ತಿಯ ಹೆಸರು, ದಿನಾಂಕ ಮತ್ತು ಮೊತ್ತವನ್ನು ಸ್ಪಷ್ಟವಾಗಿ ಬರೆದು ಚೆಕ್‌ನ ಮೇಲೆ ಎರಡು ಕ್ರಾಸ್ ಗೆರೆಗಳನ್ನು ಎಳೆದು ಅಕೌಂಟ್ ಪೇಯೀ ಅಥವಾ ನಾಟ್ ನೆಗೋಷಿಯೇಬಲ್ ಎಂಬುದಾಗಿ ನಮೂದಿಸಿ ಚೆಕ್‌ನ್ನು ನೀಡುವುದರಿಂದ ಚೆಕ್ ದುರುಪಯೋಗ ಆಗದಂತೆ ಮುಂಜಾಗ್ರತೆ ವಹಿಸಬಹುದಾಗಿದೆ. ಮಾತ್ರವಲ್ಲದೇ ಚೆಕ್‌ನ್ನು ಬೇರೆಯವರಿಗೆ ಹಸ್ತಾಂತರ ಮಾಡುವುದಕ್ಕಿಂತ ಮುಂಚೆ ನಾವು ನೀಡುವ ಚೆಕ್‌ನ ಸಂಪೂರ್ಣ ವಿವರ ಮತ್ತು ಉದ್ದೇಶ ಹಾಗೂ ಚೆಕ್ ಪಡಕೊಳ್ಳುವವರ ಹೆಸರು ಮತ್ತು ವಿಳಾಸವನ್ನು ಬರೆದಿಟ್ಟುಕೊಳ್ಳಬೇಕು. ಅದೇ ಪ್ರಕಾರ ಸಾಲವನ್ನು ಪಡಕೊಳ್ಳುವ ಸಂದರ್ಭದಲ್ಲಿ ಖಾಸಗಿ ಲೇವಾದೇವಿದಾರರು ನಮ್ಮ ಸಹಿಯನ್ನು ಸಾಲದ ಅರ್ಜಿ, ಇಂಡೆಮ್ನಿಟಿ ಬಾಂಡ್, ಅಗ್ರಿಮೆಂಟ್ ಮತ್ತಿತರ ದಾಖಲೆಗಳಲ್ಲಿ ಪಡೆಯಲು ಇಚ್ಚಿಸಿದಲ್ಲಿ ನಾವು ಸಹಿ ಮಾಡುವ ಅಂತಹ ದಾಖಲೆಗಳು ಸರಿಯಾಗಿ ಮತ್ತು ಸಂಪೂರ್ಣವಾಗಿ ಭರ್ತಿಗೊಳಿಸಿದ ನಂತರವೇ ಅಂತಹ ಕಾಗದ ಪತ್ರಗಳಿಗೆ ಸಹಿ ಮಾಡಬೇಕು.

ಸಾಲಗಾರರ ರಕ್ಷಣೆಗಾಗಿ ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ (ತಿದ್ದುಪಡಿ) ಕಾಯ್ದೆ ಹಾಗೂ ಇತರ ಕಾನೂನುಗಳು ಜಾರಿಯಲ್ಲಿ ಇದ್ದಾಗಿಯೂ, ಸಾಲ ಪಡಕೊಳ್ಳುವ ಸಂದರ್ಭದಲ್ಲಿ ನಾವು ಸೂಕ್ತ ಮುನ್ನೆಚ್ಚರಿಕೆಯನ್ನು ವಹಿಸದೆ ಸಹಿ ಮಾಡಿದ ಖಾಲಿ ಚೆಕ್‌ನ್ನು ನೀಡುವುದರಿಂದ ಮತ್ತು ಸರಿಯಾಗಿ ಮತ್ತು ಸಂಪೂರ್ಣವಾಗಿ ಭರ್ತಿ ಮಾಡದೇ ಇರುವ ಕಾಗದ ಪತ್ರಗಳಿಗೆ ಸಹಿ ಮಾಡಿ ಸಾಲ ನೀಡುವ ವ್ಯಕ್ತಿಗಳಿಗೆ ಅಥವಾ ಹಣಕಾಸು ಸಂಸ್ಥೆಗೆ ನೀಡುವುದರಿಂದ ಮುಂದಕ್ಕೆ ಅಪಾಯವನ್ನು ಎದುರಿಸಬೇಕಾದ ಪರಿಸ್ಥಿತಿ ಉಧ್ಭವಿಸುವ ಸಾಧ್ಯತೆ ಇರುತ್ತದೆ.























































error: Content is protected !!
Scroll to Top