ಕೆರೆಗೆ ನೀರಿನಂತೆ ಹರಿದ ನೆತ್ತರು
ಹಾಸನ : ಗೋಮಾಂಸಕ್ಕಾಗಿ ಜಾನುವಾರುಗಳ ಮಾರಣಹೋಮ ನಡೆಸಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆ ಬಳಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ 60ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಗೋವುಗಳ ಹತ್ಯೆ ವಿಚಾರ ತಿಳಿದ ಕೂಡಲೇ ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅಷ್ಟರಲ್ಲೇ ಕರುಗಳು ಸೇರಿದಂತೆ 60ಕ್ಕೂ ಹೆಚ್ಚು ಜಾನುವಾರುಗಳನ್ನು ಹತ್ಯೆ ಮಾಡಿ ನೇತು ಹಾಕಲಾಗಿತ್ತು. ಐದು ಗೋವುಗಳನ್ನು ರಕ್ಷಣೆ ಮಾಡಲು ಪೊಲೀಸರಿಂದ ಸಾಧ್ಯವಾಗಿದೆ. ಸಾವಿರ ಕೆಜಿಗೂ ಅಧಿಕ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋವುಗಳ ಮಾರಣಹೋಮ ನಡೆದಿದೆ. ಗೋವುಗಳನ್ನು ಹತ್ಯೆ ಮಾಡಿ ಗೋವುಗಳ ರಕ್ತವನ್ನು ಪಕ್ಕದ ಕೆರೆಗೆ ಹರಿಸಿದ್ದಾರೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಗೋಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.










































































