ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳುವಿಗೆ ‌ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್

ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಮಂಗಳೂರು: ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯು ಸತತ ಮೂರು ಗಂಟೆಗಳ ಕಾಲ ನಡೆದಿದ್ದು, ಅದಾದ ನಂತರ ಸಿ ಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಕರಾವಳಿಯ ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ನೀಡಲು ನಿರ್ಣಯ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

ಈ ಹಿಂದಿನ ಸರ್ಕಾರಗಳು ಈ ಕೆಲಸವನ್ನು ಯಾಕೆ ಮಾಡಿಲ್ಲ ಎನ್ನುವ ಬಗ್ಗೆ ನಾವು ಮಾತನಾಡುವುದಿಲ್ಲ. ನಮಗೆ ಬದ್ಧತೆ ಇದ್ದು, ನಾವು ಜನರ ಭಾವನೆಗಳ ಜೊತೆಗೆ ರಾಜಕೀಯ ಮಾಡುವುದಿಲ್ಲ ಬದಲಾಗಿ ಬದುಕಿನ ಮೇಲೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಯು.ಟಿ. ಖಾದರ್ ಅವರು ಸ್ಪೀಕರ್ ಆಗಿದ್ದರು. ಅವರು ತುಳು ಭಾಷೆಯ ಕುರಿತಂತೆಯೇ ಮೊದಲು ಪ್ರಶ್ನೆ ಮಾಡಿದ್ದು. ಈ ಬಗ್ಗೆ ಮಾತನಾಡಿದ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ.

ಕರ್ನಾಟಕ ಸರ್ಕಾರ ಕರಾವಳಿಯ ಜನರ ಭಾವನೆಗೆ ಬೆಲೆ ನೀಡಿ ತುಳುವಿಗೆ ‌ಸ್ಥಾನಮಾನ ನೀಡಲು ಮುಂದಾಗಿದ್ದು ತುಳುವರ ಖುಷಿ ಹೆಚ್ಚಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕರಾವಳಿ ಪ್ರವಾಸೋದ್ಯಮಕ್ಕೂ ‌ಬಂಪರ್ ಕೊಡುಗೆ

ತುಳು ಭಾಷೆಗೆ ಮಾನ್ಯತೆಯ ಜೊತೆಗೆ ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೂ ಸರ್ಕಾರ ಮಹತ್ವದ ಕೊಡುಗೆ ನೀಡಿದೆ.

ಕಾರವಾರ, ಭಟ್ಕಳ, ಅಂಕೋಲಾ ತಾಲೂಕುಗಳ 7 ದ್ವೀಪ ಅಭಿವೃದ್ಧಿಗೆ 307.71 0. ಕೋಟಿ ರೂ., ಉ.ಕ. ಜಿಲ್ಲೆಯ ಬಂದರು ಮತ್ತು ಹಡಗು ನಿರ್ಮಾಣ ಅಂಗಳ ಅಭಿವೃದ್ಧಿಗೆ 6,925 ಕೋಟಿ ರೂ. ಗುರುಪುರ ನದಿ ದ್ವೀಪ ಅಭಿವೃದ್ಧಿಗೆ 125.43 ಕೋಟಿ ರೂ., ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿಗೆ 250.05 ಕೋಟಿ ರೂ., ಮಂಗಳೂರಿನ ಲೈಟ್‌ಹೌಸ್‌ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿಗೆ 60.34 ಕೋಟಿ ರೂ., ಉಡುಪಿ ಜಿಲ್ಲೆಯ ದ್ವೀಪ ಇಕೋ ಟೂರಿಸಂ ತಾಣ ಅಭಿವೃದ್ಧಿಗೆ 279.03 ಕೋಟಿ ರೂ., ಕೋಟಿಪುರದಿಂದ-ಬೋಳಾರ ನೇತ್ರಾವತಿ ನದಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 50 ಕೋಟಿ ರೂ., ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ ಸೇತುವೆ ನಿರ್ಮಾಣಕ್ಕೆ 55 ಕೋಟಿ ರೂ., ಮಂಗಳೂರು-ಆತ್ರಾಡಿ ರಾಜ್ಯ ಹೆದ್ದಾರಿ ಮೇಲೇತುವೆ ನಿರ್ಮಾಣಕ್ಕೆ 40 ಕೋಟಿ ರೂ., ಸೇತುವೆ ನಿರ್ಮಾಣಕ್ಕೆ 33 ಕೋಟಿ ರೂ., ದಾಮಸ್‌ಕಟ್ಟೆ-ಬಳ್ಳುಂಜೆ ಜಿಲ್ಲಾ ಮುಖ್ಯ ರಸ್ತೆ ಸೇತುವೆ ಮರುನಿರ್ಮಾಣಕ್ಕೆ 25 ಕೋಟಿ ರೂ., ಕಡಬ ತಾಲೂಕು, ಕೊಡಿಂಬಾಲ ಗ್ರಾಮದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ 5 ಸೆಂಟ್ಸ್ ಜಮೀನು, ಮಳವೂರು, ಕರೋಪಾಡಿ, ಸಂಗಬೆಟ್ಟು ಸಹಿತ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಒಟ್ಟು 38.66 ಕೋಟಿ ರೂ. ನೀಡುವುದಾಗಿ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಹೇಳಿದ್ದಾರೆ.

ದಕ್ಷಿಣ ಕನ್ನಡಕ್ಕೆ ಮಂಗಳೂರು ಮರುನಾಮಕರಣ: ಜನಾಭಿಪ್ರಾಯ ಸಂಗ್ರಹ

ಮಂಗಳೂರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ದಕ್ಷಿಣ ಕನ್ನಡದ ಬದಲಿಗೆ ಮಂಗಳೂರು ಎಂದು ಹೆಸರಿಸುವ ಬಗ್ಗೆ ಜನಾಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು. ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿ ನೀಡಿ, ಜನರ ಭಾವನೆ, ಜನರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದರು.

ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ

ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈವರೆಗಿನ ಎಲ್ಲಾ ನೀತಿಗಳಿಗಿಂತ ಭಿನ್ನವಾದ ನೀತಿ ಇದಾಗಲಿದೆ. ಹೂಡಿಕೆದಾರರಿಗೆ ಹೆಚ್ಚಿನ ಶಕ್ತಿ ಹಾಗೂ ಸಾಲ ಮರುಪಾವತಿಗೆ ಸಮಯಾವಕಾಶ ನೀಡಲಾಗುವುದು. ಮಲೆನಾಡು ಒಳಗೊಂಡಂತೆ ಕರಾವಳಿ ಪ್ರದೇಶದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಮೂಲಕ ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸಲಾಗುವುದು. ಅಲ್ಲದೆ ಅನೇಕ ಪ್ರೋತ್ಸಾಹಕಗಳನ್ನು ನೀಡಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಮೀನುಗಾರಿಕಾ ವಿಶ್ವವಿದ್ಯಾಲಯ

ಮೀನುಗಾರಿಕೆಗೆ ಸಂಬಂಧಿಸಿದಂತೆ Fisheries, Blue economy university ಸ್ಥಾಪಿಸಲಾಗುವುದು. ಪ್ರಸ್ತುತ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶವನ್ನು 60 ರಿಂದ 200 ಸೀಟುಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.

ಈ ಭಾಗದಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗೆ ಬೇಡಿಕೆ ಬಂದಿದೆ ಎಂದು ತಿಳಿಸಿದ ಅವರು ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 549 ಕೋಟಿ ರೂ. ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ 10-12 ಕಡೆ ಸಚಿವ ಸಂಪುಟ ಸಭೆ

ಬೆಂಗಳೂರಿನಿಂದಾಚೆಗೆ ಮಂಗಳೂರಿನಲ್ಲಿ ಮೊದಲ ಬಾರಿ ಸಚಿವ ಸಂಪುಟ ಸಭೆ ನಡೆಸಿರುವುದು ಸ್ವಾಗತಾರ್ಹ. ಇತರ ಜಿಲ್ಲೆಗಳಲ್ಲೂ ಸಚಿವ ಸಂಪುಟ ಸಭೆ ನಡೆಸುವಿರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಮುಂದಿನ 15 ತಿಂಗಳ ಅವಧಿಯಲ್ಲಿ 10 – 12 ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದೆ. ಎಲ್ಲಿ ಸಾಮರ್ಥ್ಯವಿದೆ, ಅಗತ್ಯವಿದೆ- ಅಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸಮಗ್ರ ಕರ್ನಾಟಕ, ಸಮೃದ್ಧ ಕರ್ನಾಟಕವಾಗಿಸುವುದು ನಮ್ಮ ಗುರಿ ಎಂದು ಅವರು ವಿವರಿಸಿದರು.

ದೇಶದಲ್ಲೇ ಗಮನ ಸೆಳೆದ ದಕ್ಷಿಣ ಕನ್ನಡ

ಇಂದು ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ವಿವಿಧ ಆಯಾಮದ ಅಭಿವೃದ್ಧಿ ಯೋಜನೆಗಳನ್ನು ನೀಡುತ್ತಿದ್ದೀರಿ. ರಾಜ್ಯದ ಇತರ ಭಾಗಗಳಿಗೂ ಇದನ್ನು ವಿಸ್ತರಿಸುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಖಂಡಿತವಾಗಿ ವಿಸ್ತರಿಸಲಾಗುವುದು ಎಂದರು. ಜೊತೆಗೆ ದಕ್ಷಿಣ ಕನ್ನಡ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ದೇಶದಲ್ಲೇ ಗಮನ ಸೆಳೆದಿದೆ. ದೇಶಕ್ಕೆ 6 ರಾಷ್ಟ್ರೀಕೃತ ಬ್ಯಾಂಕುಗಳನ್ನು ನೀಡಿ ಆರ್ಥಿಕ ಶಕ್ತಿಯನ್ನು ಹೊಂದಿರುವ ಸ್ಥಳವಿದು. ಬಂದರುಗಳಿವೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಪ್ರಮುಖ ಕೇಂದ್ರವಾಗಿದೆ ಎಂದು ವಿವರಿಸಿದರು.

ಭಾಷೆಯ ಕುರಿತ ಭಾವನೆ ದೊಡ್ಡದು

ತುಳು ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಿಸುವ ಕುರಿತು ಈ ಭಾಗದ ಜನರ ಭಾವನೆ, ಒತ್ತಡಗಳ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, * ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಶಾಸಕರಾದ ನಂತರ ಅಧಿವೇಶನದಲ್ಲಿ ಕೇಳಿದ ಮೊದಲ ಪ್ರಶ್ನೆ ತುಳು ಭಾಷೆಯ ಕುರಿತಾದುದು. ನನಗೆ ಆಶ್ಚರ್ಯವಾಗಿತ್ತು. ಆದರೆ ಅವರ ಮೊದಲ ಭಾವನೆ ಇದ್ದದ್ದು ಭಾಷೆಯ ಮೇಲೆ. ಇಂದು ಅವರು 500 ಕೋಟಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಕೊಂಡು ಲಾಟರಿ ಹೊಡೆದಿದ್ದಾರೆ, ಅದು ಬೇರೆ ವಿಷಯ. ಯು.ಟಿ. ಖಾದರ್ ಆಗ ಸ್ಪೀಕ‌ರ್ ಆಗಿದ್ದರು. ಇಬ್ಬರೂ ತುಳುವಿನಲ್ಲಿ ಮಾತನಾಡುತ್ತ, ಇತರರೂ ಸೇರಿ ಒತ್ತಡ ಹೇರಿದರು ಎಂದು ಸ್ಮರಿಸಿದರು..



























































































































error: Content is protected !!
Scroll to Top