ಯಾವುದೇ ಒಬ್ಬ ವ್ಯಕ್ತಿ ತಾನು ವೈಯಕ್ತಿಕ ನೆಲೆಯಲ್ಲಿ ಅಥವಾ ಯಾವುದೇ ನೋಂದಾಯಿತ ಅಥವಾ ನೋಂದಾಯಿತವಾಗದೇ ಇರುವ ಸೇವಾ ಸಂಸ್ಥೆ ಅಥವಾ ಟ್ರಸ್ಟ್ ಪರವಾಗಿ ಸಾರ್ವಜನಿಕ ಯೋಜನೆಗಾಗಿ ಅಥವಾ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಹಣ ಅಥವಾ ದೇಣಿಗೆಯನ್ನು ಪಡೆಯುವುದನ್ನು ಸಾರ್ವಜನಿಕ ನಿಧಿ ಸಂಗ್ರಹಣೆ ಎಂದು ಹೇಳಲಾಗುತ್ತದೆ.
ಕೇವಲ ಸಾರ್ವಜನಿಕ ನಿಧಿ ಸಂಗ್ರಹಣೆ ಕಾರ್ಯವನ್ನು ಅಪರಾಧವೆಂದು ಪರಿಗಣಿಸಲು ಅಗುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ಕಾನೂನಿನ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಮತ್ತು ಕಾನೂನು ಬಾಹಿರವಾಗಿ ಸಾರ್ವಜನಿಕರಿಂದ ದೇಣಿಗೆಯನ್ನು ಪಡೆದು ತನ್ನ ಇಚ್ಚಾನುಸಾರದಂತೆ ಖರ್ಚು ಮಾಡುವಂತಿಲ್ಲ. ಸಾರ್ವಜನಿಕ ಯೋಜನೆಗಾಗಿ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ನಿಧಿ ಸಂಗ್ರಹಣೆ ಮತ್ತು ಅದರ ಬಳಕೆೆಯನ್ನು ಮಾಡುವ ಸಂಧರ್ಬದಲ್ಲಿ ಉದ್ದೇಶಿಸಿರುವ ಯೋಜನೆ, ಉದ್ದೇಶ, ಸ್ಥಳ, ಮೊತ್ತ, ಸಂಸ್ಥೆಯ ಸ್ವರೂಪ, ಇತ್ಯಾದಿಗಳಿಗೆ ಅನುಗುಣವಾಗಿ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ ಕರ್ನಾಟಕ ಎಚ್. ಆರ್.ಸಿ.ಇ. ಕಾಯ್ದೆ, ಎಪ್.ಸಿ.ಆರ್.ಎ., ಅದಾಯ ತೆರಿಗೆ ಕಾಯ್ದೆ, ಯೋಜನೆಯ ಸ್ಥಳವು ಸರಕಾರ ಅಥವಾ ಸ್ಥಳೀಯ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟಲ್ಲಿ ಅದಕ್ಕೆ ಸಂಬಂಧಪಟ್ಟ ವಿವಿಧ ಕಾನೂನುಗಳ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಯಾವುದೇ ಸಂಸ್ಥೆಯ ಹೆಸರಿನಲ್ಲಿ ಒಬ್ಬ ವ್ಯಕ್ತಿಯು ದೇಣಿಗೆ ರೂಪದಲ್ಲಿ ಹಣವನ್ನು ಸ್ವೀಕರಿಸುವ ಮತ್ತು ಖರ್ಚು ಮಾಡುವ ಬಗ್ಗೆ ಅಧಿಕೃತವಾದ ಲೆಕ್ಕಪತ್ರಗಳನ್ನು ಸೂಕ್ತ ವಿವರ ಮತ್ತು ನೈಜ ಬಿಲ್ಲು ಮತ್ತು ರಶೀದಿಗಳೊಂದಿಗೆ ನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಕರ್ನಾಟಕದಲ್ಲಿ ಸಾರ್ವಜನಿಕ ನಿಧಿಗಳ ಸಂಗ್ರಹಣೆ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ಹಣಕಾಸು ಇಲಾಖೆಯು ಇತ್ತೀಚೆಗೆ ವಿವಿಧ ನಿಯಮಗಳನ್ನು ಜಾರಿಗೊಳಿಸಿರುತ್ತದೆ. ಯಾವುದೇ ಸಂಸ್ಥೆಯ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಪದಾಧಿಕಾರಿಯು ಸಾರ್ವಜನಿಕರಿಂದ ದೇಣಿಗೆಯನ್ನು ಸ್ವೀಕರಿಸಿದಲ್ಲಿ ಅದು ಸಂಸ್ಥೆಯ ಪರವಾಗಿ ಪಡೆದ ಸಾರ್ವಜನಿಕ ನಿಧಿಯಾಗಿ ಮಾರ್ಪಾಡು ಅಗುವುದರಿಂದ ಆತ ಅದನ್ನು ತನ್ನಷ್ಟಕೆ ತನ್ನ ವೈಯುಕ್ತಿಕ ನೆಲೆಯಲ್ಲಿ ಬಳಸುವ ಅಧಿಕಾರವನ್ನು ಹೊಂದಿರುವುದಿಲ್ಲ. ಅತ ತಾನು ಪಡೆದ ಹಣದ ಮತ್ತು ಖರ್ಚಿನ ನಿರ್ವಹಣೆಯ ಪ್ರತಿಯೊಂದು ವಿವರವನ್ನು ಕೂಲಂಕುಷವಾಗಿ ಸಂಸ್ಥೆಯ ಲೆಕ್ಕ ಪುಸ್ತಕಗಳಲ್ಲಿ ಕಾಣಿಸಬೇಕಾಗುತ್ತದೆ.

ಸಾರ್ವಜನಿಕರಿಂದ ದೇಣಿಗೆ ಅಥವಾ ಹಣವನ್ನು ಪಡೆಯುವ ವ್ಯಕ್ತಿ ಹಣವನ್ನು ಸ್ವೀಕರಿಸಲು ಆತನಿಗೆ ಕಾನೂನುಬದ್ಧ ಅಧಿಕಾರ ಇರಬೇಕು ಮಾತ್ರವಲ್ಲದೇ ತಾನು ಸ್ವೀಕರಿಸಿದ ಹಣವನ್ನು ವಿನಿಯೋಗಿಸಲು ಸಹಾ ಕಾನೂನಾತ್ಮಕವಾದ ಅಧಿಕಾರವನ್ನು ಹೊಂದಿರಬೇಕಾಗುತ್ತದೆ. ಆತ ತನ್ನ ವೈಯಕ್ತಿಕ ಖರ್ಚಿಗೆ ಬಳಸಿದಲ್ಲಿ ಅಥವಾ ನಿರ್ಧರಿಸಿದ ಯೋಜನೆಯನ್ನು ಹೊರತು ಪಡಿಸಿ ಬೇರೆ ಯೋಜನೆಗಳಿಗೆ ವಿನಿಯೋಗಿಸಿದಲ್ಲಿ ಆತ ಸಾರ್ವಜನಿಕ ಹಣವನ್ನು ದುರುಪಯೋಗ ಇತ್ಯಾದಿ ಶಿಕ್ಷಾರ್ಹ ಅಪರಾಧವನ್ನು ನಡೆಸಿದಂತಾಗುತ್ತದೆ. ಸಂಸ್ಥೆಯು ಒಂದು ವೇಳೆ ಯಾವುದೇ ಸಮಾಜ ಸೇವಾ ಸಂಸ್ಥೆಯಾಗಿದ್ದು ಕರ್ನಾಟಕ ಸಹಕಾರ ಸಂಘಗಳ ನಿಯಾಮಾನುಸಾರದ ಪ್ರಕಾರ ನೋಂದಾಯಿಸಲ್ಪಟ್ಟ ಸಮಾಜ ಸೇವಾ ಸಂಸ್ಥೆ ಅಥವಾ ದೇವಸ್ಥಾನವಾಗಿದ್ದಲ್ಲಿ ಸಾರ್ವಜನಿಕರಿಂದ ಪಡೆದ
ಹಣವನ್ನು ನಿರ್ಧಿಷ್ಟ ಉದ್ದೇಶಕ್ಕೆ ಬಳಸುವ ಮುಂಚೆ ಪಡೆದ ಮೊತ್ತದ ವಿವರವನ್ನು ಅಧಿಕೃತವಾದ ಲೆಕ್ಕಪುಸ್ತಕಗಳಲ್ಲಿ ಕಾಣಿಸಿ, ಸಂಸ್ಥೆಯ ಲಿಖಿತ ಒಪ್ಪಿಗೆ ಮೂಲಕ ಬಳಸುವುದು ಮತ್ತು ಸಾರ್ವಜನಿಕರಿಂದ ಪಡೆಯುವ ಮೊತ್ತಕ್ಕೆ ಕೇವಲ ರಶೀದಿಯನ್ನು ನೀಡುವ ಮೂಲಕ ಅಥವಾ ಪಡೆದ ಹಣದ ವಿವರದ ಬಗ್ಗೆ ಲೆಕ್ಕಪತ್ರಗಳಲ್ಲಿ ತೋರಿಸುವುದಕ್ಕಿಂತ ಹೆಚ್ಚಾಗಿ ಪಡೆದ ಹಣವನ್ನು ಖರ್ಚು ಮಾಡುವ ಅಥವಾ ಬಳಸುವ ಮುನ್ನ ಸಂಬಂಧಪಟ್ಟ್ಟ ಸಂಸ್ಥೆಯಿಂದ ಅಧಿಕೃತವಾದ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ.











































































