2,500 ವರ್ಷಗಳಷ್ಟು ಇತಿಹಾಸವುಳ್ಳ ದ್ರಾವಿಡ ಪಂಚ ಮಹಾಭಾಷೆ (ತುಳು, ಕನ್ನಡ, ತೆಲುಗು, ತಮಿಳು, ಮಲಯಾಳ) ಗಳಲ್ಲಿ ತುಳುನಾಡಿನ ಮೂಲ ಭಾಷೆ ತುಳುವಿಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನವನ್ನು ಕರ್ನಾಟಕ ಸರ್ಕಾರ ನೀಡಿದೆ. ಇದು ತುಳುವರಿಗೆ ಸಿಕ್ಕ ಗೆಲುವು.
ವಸಾಹತುಶಾಹಿ ಮತ್ತು ರಾಜಾಡಳಿತದ ಕಾಲದಲ್ಲಿ ತುಳುನಾಡು ಎಂಬ ಪ್ರತ್ಯೇಕವಾದ ತುಳು ಭಾಷೆಗಳ ವಿಸ್ತಾರವಾದ ನಾಡೊಂದು ಇತ್ತು ಎಂಬುದು ಪ್ರಾಚೀನ ಇತಿಹಾಸ, ಶಿಲಾ ಶಾಸನಗಳು, ತಾಮ್ರ ಶಾಸನಗಳು, ಮತ್ತು ತಾಳೆಗರಿಗಳನ್ನು ಅವಲೋಕಿಸಿದಾಗ ಸ್ಪಷ್ಟವಾಗಿ ಕಂಡುಬರುತ್ತದೆ. ತುಳುನಾಡು, ತುಳುವ ಕೊಂಕಣನಾಡು ಎಂದು ಬಹಳಷ್ಟು ಶಾಸನಗಳಲ್ಲಿ ಈ ನಾಡನ್ನು ಹಾಡಿ ಹೊಗಳಲಾಗಿದೆ.
ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಈ ಮೂರು ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಕರ್ನಾಟಕದ ಶಿವಮೊಗ್ಗ ಚಿಕ್ಕಮಗಳೂರು, ಮಡಿಕೇರಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ, ದೂರದ ಮುಂಬಯಿ, ಪುಣೆ, ಗುಜರಾತ್, ದಿಲ್ಲಿಗಳಲ್ಲಿ ಮತ್ತು ವಿಶ್ವದ ಪ್ರಮುಖ ದೇಶಗಳಲ್ಲಿ ಒಟ್ಟಾರೆ 1.5 ಕೋಟಿಯಷ್ಟು ಜನರು ತುಳು ಭಾಷೆ ಬಲ್ಲವರಾಗಿದ್ದಾರೆ. ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಭಾಷೆಯ ಅವನತಿಯಾದರೆ ಆ ಭಾಷೆಗೆ ಸಂಬಂಧಿಸಿದ ಸಂಸ್ಕೃತಿಯೇ ನಾಶವಾಗುತ್ತದೆ. ಇಂದು ತುಳು ಭಾಷೆಯು ಇಂಗ್ಲಿಷ್‌ನ ಪ್ರಾಬಲ್ಯದಿಂದಾಗಿ ಕುಂಟುತ್ತಾ ಸಾಗುತ್ತಿದ್ದರೆ, ಅದರೊಂದಿಗೆ ತುಳು ಸಂಸ್ಕೃತಿಯಾದ ಕೃಷಿ, ಪ್ರಕೃತಿಯ ಆರಾಧನೆಗಳಾದ ನಾಗಾರಾಧನೆ, ದೈವಾರಾಧನೆ, ಕಂಬಳ ಮತ್ತು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ, ತುಳು ಕ್ರೀಡೆಗಳಾದ ಲಗೋರಿ, ಕೆಸರುಗದ್ದೆ ಓಟ, ವೈಜ್ಞಾನಿಕವಾಗಿ ಪರಿಗಣಿತವಾದ ತುಳುವರ ಆಹಾರ ಪದ್ಧತಿ, ಕೂಡು ಕುಟುಂಬ ವ್ಯವಸ್ಥೆ ಧರ್ಮ ಸಮನ್ವಯ ಇತ್ಯಾದಿಗಳೆಲ್ಲವೂ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಾ ಸಾಗುತ್ತಿದೆ. ಆದರೆ ಕರ್ನಾಟಕಕ್ಕೆ ಸಂಬಂಧಿಸಿದ ಹಾಗೆ ರಾಜ್ಯ ಸರ್ಕಾರವೇ ತುಳುವಿಗೆ ಸಾಂವಿಧಾನಿಕ ಮಾನ್ಯತೆ ನೀಡಿದ್ದು ಇದರಿಂದಾಗಿ ಇಲ್ಲಿನ ಆರಾಧನೆಗಳು, ಸಂಸ್ಕೃತಿ, ಪದ್ಧತಿ, ಆಚಾರ ವಿಚಾರಗಳ ಉಳಿಯುವಿಕೆ ಮತ್ತು ಬೆಳೆಯುವಿಕೆಗೆ ಅನುಕೂಲಕರವಾಗಲಿದೆ. ತುಳು ಸಂಸ್ಕೃತಿಯ ಪುನರುತ್ಥಾನಕ್ಕೂ ಇದು ಸಹಕಾರಿಯಾಗಲಿದೆ.

ಯಾವುದೇ ಭಾಷೆ ಸಂವಿಧಾನದ ಮಾನ್ಯತೆ ಪಡೆಯಬೇಕಾದ ಅದಕ್ಕೆ ಯಾವುದೇ ರೀತಿಯ ಸಿದ್ಧ ಮಾನದಂಡಗಳಿಲ್ಲ. ಇದಕ್ಕೆ ಬೇಕಾದದ್ದು ಜನರ ಭಾವನೆಗಳ ಒತ್ತಡ, ರಾಜಕೀಯ ಇಚ್ಚಾಶಕ್ತಿ, ಮತ್ತು ಮಾಧ್ಯಮಗಳ ಸಹಕಾರ. ಆ ಎಲ್ಲಾ ವ್ಯವಸ್ಥೆಗಳ ಕಾರಣಕ್ಕೆ ಇಂದು ನಮ್ಮ ತೌಳವರ ಭಾಷೆ ತುಳುವಿಗೂ ರಾಜ್ಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕೇಂದ್ರದಲ್ಲೂ ತುಳುವಿಗೆ ಮಾನ್ಯತೆ ಸಿಗಲಿ ಎನ್ನುವ ಆಶಯದ ಜೊತೆಗೆ ನಾವು ಮತ್ತಷ್ಟು ಕೆಲಸ ಮಾಡಬೇಕು ಎಂಬ ಮಹತ್ವದ ಜವಾಬ್ದಾರಿಯೊಂದು ನಮ್ಮೆಲ್ಲರ ಮೇಲಿದೆ.
ಭಾಷಿಗರ ಸಂಖ್ಯೆ, ಭಾಷೆಯಲ್ಲಿರುವ ಸಾಹಿತ್ಯ, ಅದಕ್ಕಿರುವ ಪುರಾತನ ಮೌಲ್ಯ, ದಾಖಲೆಗಳು, ಶಾಸನಗಳು, ಇದ್ಯಾವುದೂ ಇದಕ್ಕೆ ಮಾನದಂಡಗಳಲ್ಲ. ಆ ನಿಟ್ಟಿನಲ್ಲಿ ಯೋಚಿಸಿದರೂ ಈಗಾಗಲೇ ಮಾನ್ಯತೆ ಪಡೆದುಕೊಂಡಿರುವ ದೇಶದ 22 ಭಾಷೆಗಳಲ್ಲಿ ಹಲವು ಭಾಷೆಗಳಿಂದಲೂ ಉತ್ತಮವಾದ ಸ್ಥಾನವನ್ನು ತುಳು ಭಾಷೆ ಹೊಂದಿದೆ. ಶಾಸ್ತ್ರೀಯ ಭಾಷೆ ಎನ್ನಿಸಿಕೊಳ್ಳಲು ಬೇಕಾದ ಬಹುತೇಕ ಎಲ್ಲಾ ಸಾಮರ್ಥ್ಯ ಮತ್ತು ಗುಣಮಟ್ಟ ತುಳು ಭಾಷಾ ಸಂಸ್ಕೃತಿಯಲ್ಲಿ ಇದೆ. ಇದು ಒಂದು ಪ್ರಮುಖ ಮಾನದಂಡ.
ಆಗಬೇಕಾಗಿರುವುದು
ಲೋಕಸಭೆಯಲ್ಲಿ ಒಂದು ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅದನ್ನು ಸಂಸತ್ ಉಭಯ ಸದನಗಳಲ್ಲಿ ಅಂಗೀಕರಿಸಿ ಅದಕ್ಕೆ ರಾಷ್ಟ್ರಪತಿಗಳ ಮುದ್ರೆಯೊಂದು ಬಿದ್ದರೆ ಮುಗಿಯಿತು. ಅದೇ ರೀತಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಸೂದೆಯನ್ನು ಅಂಗೀಕರಿಸಿ ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದರೆ ತುಳು ರಾಜ್ಯದ ಅಧಿಕೃತ ಭಾಷೆಯಾಗುತ್ತದೆ. ಈ ಸಂಬಂಧ ಸರಕಾರದಿಂದಲೇ ಮಸೂದೆ ಮಂಡನೆ ಆಗಬೇಕೆಂದೇನೂ ಇಲ್ಲ, ರಾಜಕೀಯ ಇಚ್ಛಾಶಕ್ತಿ ಇದ್ದರೆ ಯಾವುದೇ ಸಂಸದರು, ಶಾಸಕರು ಖಾಸಗಿ ಮಸೂದೆ ಮಂಡನೆ ಮಾಡಬಹುದು.
ನಾವು ಮಾಡಬೇಕಾದದ್ದು
ಕೊಂಕಣಿ, ಬ್ಯಾರಿ, ಮರಾಠಿ ಇತರ ಮಾತೃಭಾಷೆಗಳನ್ನು ಬಳಸುವವರು ತಮ್ಮ ವ್ಯಾವಹಾರಿಕ ಭಾಷೆ ತುಳು ಎಂದು ನಮೂದಿಸಿದರೆ ನಾಡಿನ ಬೆಳವಣಿಗೆಗೆ ಪೂರಕ. ಮಣ್ಣಿನ ಭಾಷೆಯು ಸರ್ಮಧರ್ಮೀಯರನ್ನು ಒಂದೇ ತತ್ತ್ವದಡಿ ಬೆಸೆಯುತ್ತದೆ. ತುಳುನಾಡಿನ ಪ್ರತಿಯೊಂದು ವೇದಿಕೆಯಲ್ಲಿ ಈ ವಿಚಾರ ಪ್ರಸ್ತಾವಗೊಂಡು ಒತ್ತಡ ಸೃಷ್ಟಿಯಾದರೆ ನಮ್ಮ ಅಪೂರ್ವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಳ್ಳುವುದರ ಜತೆಯಲ್ಲಿ ಭಾರತೀಯತೆಯನ್ನು ರಕ್ಷಿಸಿದಂತಾಗುತ್ತದೆ. ಅದು ಈ ನಾಡಿನ ಪ್ರತೀ ಪ್ರಜೆಯ ಕರ್ತವ್ಯವೂ ಹೌದು.
✍️ ಡಾ. ಆಕಾಶ್ ರಾಜ್ ಜೈನ್




































