ಭಾರತದ ಇತಿಹಾಸ ಗುಲಾಮಗಿರಿಯ ಇತಿಹಾಸವಲ್ಲ-ಅದು ಹೋರಾಟದ ಇತಿಹಾಸ
ವಿಜಯನಗರ ಸಾಮ್ರಾಜ್ಯ ಪತನದ ನಂತರ ಮತ್ತೊಮ್ಮೆ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಪ್ರಜಾಹಿತ ರಕ್ಷಕ, ರಾಷ್ಟ್ರಪ್ರೇಮಿ ನ್ಯಾಯವಂತನಾದ ಛತ್ರಪತಿ ಶಿವಾಜಿ ಮಹಾರಾಜ ಹಿಂದೂ ಧರ್ಮಕ್ಕೆ ರಾಜ ಸಿಂಹಾಸನ ದೊರಕಿಸಿ ಕೊಟ್ಟಿದ್ದು ಅವಿಸ್ಮರಣೀಯ. ಇಂದು ಶಿವಾಜಿ ಮಹಾರಾಜರ 396ನೇ ಜಯಂತಿ. ತಾನು ಹೇಗೆ ಬೆಳೆಯಬೇಕು ತನ್ನೊಂದಿಗೆ ತನ್ನವರನ್ನು ಹೇಗೆ ಬೆಳೆಸಬೇಕು ಎಂಬುದಕ್ಕೆ ಶಿವಾಜಿಯ ಬದುಕೇ ಒಂದು ನಿದರ್ಶನ. ಸಾಮಾನ್ಯನ ಮಗ ಅಸಾಮಾನ್ಯನಾಗಿ ಬೆಳೆದದ್ದೆ ಶಿವಾಜಿಯ ಇತಿಹಾಸ. ಒಂದು ಕಡೆ ಬಿಜಾಪುರದ ಆದಿಲ್‌ಷಾಹಿ ಸುಲ್ತಾನರೊಡನೆ ಒನ್ನೊಂದು ಕಡೆ ಮೊಘಲರ ಔರಂಗಜೇಬರೊಡನೆ ಹೋರಾಡುತ್ತಾ ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಶಿವಾಜಿಯ ಸಾಹಸಮಯ ಹೋರಾಟಗಳು ರೋಮಾಂಚನಕಾರಿಯಾಗಿವೆ. ಮರಾಠ ಸಾಮ್ರಾಜ್ಯದ ಆಡಳಿತ ಅವಧಿಯಲ್ಲಿ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಿರ್ಮಾಣವಾದ ಅಂಶಗಳು ಇತಿಹಾಸದ ಪುಟದಲ್ಲಿ ಸೇರಿದೆ.
ಪ್ರಾರಂಭಿಕ ಜೀವನ
ಕ್ರಿ. ಶ. 1627ರಲ್ಲಿ ಶಿವಾಜಿ ಪುಣೆ ಶಿವನೇರಿ ದುರ್ಗ ಎಂಬಲ್ಲಿ ಜನಿಸಿದರು. ಇವರ ತಂದೆ ಷಹಾಜಿ ಭೋಸ್ಲೆ ತಾಯಿ ಜೀಜಾಬಾಯಿ. ತಂದೆ ಬಿಜಾಪುರ ಸುಲ್ತಾನನ ಬಳಿ ಉನ್ನತ ಹುದ್ದೆಯಲ್ಲಿದ್ದರಿಂದ ತಾಯಿ ಜೀಜಾಬಾಯಿ ಮಗನ ಭವಿಷ್ಯ ರೂಪಿಸಿದರು. ಶಿವಾಜಿ ತಂದೆಯ ಪ್ರೀತಿಯನ್ನು ಪಡೆಯಲಿಲ್ಲ. ಯಾಕೆಂದರೆ ಷಹಾಜಿ ತುಕಾಬಾಯಿಯನ್ನು ಎರಡನೇ ಮದುವೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇದರಿಂದ ಈತನ ಜೀವನ ರೂಪಿಸುವಲ್ಲಿ ತಾಯಿ ಜೀಜಾಬಾಯಿ ಪಾತ್ರ ಮಹತ್ವದ್ದಾಗಿದೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವಿದ್ದ ಜೀಜಾಬಾಯಿ ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನು ಹೇಳಿ ಶಿವಾಜಿಯಲ್ಲಿ ಸ್ವಧರ್ಮದ ಬಗ್ಗೆ ಗೌರವ ಮತ್ತು ಅಭಿಮಾನ ಹೆಚ್ಚಿಸಿದರು. ಶಿವಾಜಿಗೆ ಗುರು ಕೊಂಡದೇವರು ರಾಜನೀತಿ, ಯುದ್ಧ ಕೌಶಲ, ಆಡಳಿತ ಮುಂತಾದ ಕ್ಷೇತ್ರಗಳಲ್ಲಿ ಮಾರ್ಗದರ್ಶನವಿತ್ತರು. ಗುರು ರಾಮದಾಸರು ಶಿವಾಜಿಗೆ ಸ್ವಧರ್ಮಾಭಿಮಾನ ಮತ್ತು ರಾಷ್ಟ್ರಭಕ್ತಿಯನ್ನು ತಿಳಿಸಿದರು.

ಶಿವಾಜಿ ಮಹಾರಾಜರ ಮಹಾತ್ವಾಂಕ್ಷೆ
ಗುರುಕೊಂಡದೇವ ಶಿವಾಜಿನ್ನು ಬಿಜಾಪುರದ ಆಸ್ಥಾನದಲ್ಲಿ ಸೇವೆಗೆ ಸೇರಿಸಲು ಆಸೆಪಟ್ಟಿದ್ದರು. ಸ್ವಧರ್ಮ ಪ್ರೇರಣೆ ಮತ್ತು ಸ್ವರಾಜ್ಯದ ಸ್ಥಾಪನೆಗೆ ಕುದಿಯುತ್ತಿದ್ದ ಶಿವಾಜಿಯ ಬಿಸಿರಕ್ತ ಈ ಸಲಹೆಯನ್ನು ತಿರಸ್ಕರಿಸಿತು. ತಾನು ವಾಸಿಸುತ್ತಿದ್ದ ನೆಲ, ಜಲ, ಭೌಗೋಳಿಕ ಪರಿಸರ ಸಹಧರ್ಮಿಯರ ನೋವುಗಳು, ಪರಕೀಯರ (ಬ್ರಿಟಿಷರ) ದಬ್ಬಾಳಿಕೆಗಳು, ತನ್ನ ಧರ್ಮದ ಮೇಲೆ ಆಗುತ್ತಿದ್ದ ಅನ್ಯಾಯ ಮತ್ತು ಅಧರ್ಮದ ವಿರುದ್ಧ ಸಿಡಿದೇಳುವ ಗುರಿಯನ್ನು ತನ್ನದಾಗಿಸಿಕೊಂಡು ಯೋಜನೆ ರೂಪಿಸಲಾರಂಭಿಸಿದನು.
ಪ್ರಾರಂಭಿಕ ಸಾಧನೆಗಳು
ಶಿವಾಜಿ ತಂದೆ ಶಹಾಜಿಯನ್ನು ಕಾಣಲು ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಹಿಂದೂ ಸಾಮ್ರಾಜ್ಯವಾದ ವಿಜಯನಗರದ ರಾಜಧಾನಿ ಹಂಪಿಯನ್ನು ಸಂದರ್ಶಿಸಿ ಹಿಂದೂ ಸಾಮ್ರಾಜ್ಯವನ್ನು ಮತ್ತೊಮ್ಮೆ ಕಟ್ಟಲು ಪ್ರೇರಣೆ ಪಡೆದರು. ಶ್ರೀಶೈಲಕ್ಕೆ ಭೇಟಿ ನೀಡಿ ಮಲ್ಲಿಕಾರ್ಜುನ ದೇವಾಲಯ ಹೆಬ್ಬಾಗಿಲಿನ ಮೇಲೆ ಗೋಪುರ ಕಟ್ಟಿಸಿದರು. ತುಳಜಾಪುರದ ಭವಾನಿಯ ಭಕ್ತನಾಗಿದ್ದು ಶಕ್ತಿದೇವಿಯ ಆಶೀರ್ವಾದ ಪಡೆದರು.
ಸೈನಿಕ ಸಂಘಟನೆ
ಮುಸ್ಲಿಂ ದಾಳಿಕೋರರಿಂದ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಯೋಜನೆಗಳನ್ನು ರೂಪಿಸಿಕೊಂಡು ಗುಡ್ಡಗಾಡಿನ ಸಹ್ಯಾದ್ರಿಯ ತಪ್ಪಲಿನಲ್ಲಿ ಚದುರಿದ ಮಾವಳಿಗಳನ್ನು ಒಂದುಗೂಡಿಸಿ ಪಡೆಯೊಂದನ್ನು ಕಟ್ಟಿದರು. ಗೊರಿಲ್ಲಾ ಯುದ್ಧಕಲೆಯಲ್ಲಿ ನಿಪುಣರಾಗಿದ್ದ ಇವರನ್ನು ಇನ್ನಷ್ಟು ತರಬೇತಿ ನೀಡಿ ವ್ಯವಸ್ಥಿತವಾದ ಸೈನ್ಯವನ್ನು ಸಂಘಟಿಸಿದರು.
ಸಂಪನ್ಮೂಲಗಳ ಸಂಗ್ರಹ
ಶಿವಾಜಿಯಿ ತನ್ನ 16ನೇ ವಯಸ್ಸಿನಲ್ಲಿ ತಾನು ಸಂಘಟಿಸಿದ ಪಡೆಯಿಂದ ಹಿಂದೂಗಳಿಗೆ ಹಿಂಸೆ ನೀಡುತ್ತಿದ್ದ ಮುಸ್ಲಿಂ ಸರದಾರರು, ಜಹಗೀರುದಾರರು, ವ್ಯಾಪಾರಿಗಳನ್ನು ಲೂಟಿ ಮಾಡಿ ಪಡೆದ ಸಂಪತ್ತನ್ನು ಆಕ್ರಮಿಸಿ ಅದನ್ನು ಬಡ ಜನತೆಗೆ ಹಂಚುತ್ತಿದ್ದರು. ಇದರಿಂದ ಅವರ ಕೀರ್ತಿ ಮತ್ತು ಸೈನ್ಯ ಬಲ ಹೆಚ್ಚಿಸತು.
ಕೋಟೆಗಳ ವಶ
ಶಿವಾಜಿ ತನ್ನ ಸುತ್ತಮುತ್ತಲಿನ ಕೋಟೆಯತ್ತ ಗಮನ ಹರಿಸಿದರು. ಬಿಜಾಪುರ ಆದಿಲ್‌ಷಾಹಿ ಸುಲ್ತಾನ ಅನಾರೋಗ್ಯದಿಂದ ಬಳಲುತ್ತಿದ್ದ. ಇದರ ಲಾಭ ಪಡೆದ ಶಿವಾಜಿ ಮೊದಲು ತೋರಣದುರ್ಗದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡರು. ಅಲ್ಲಿ ದೊರೆತ ಅಪಾರ ಸಂಪತ್ತಿನಿಂದ ತನ್ನ ಸೈನ್ಯವನ್ನು ಇಮ್ಮಡಿಗೊಳಿಸಿ ರಾಯಗಡ, ಪ್ರತಾಪಗಡ, ಸಿಂಹಾಗೊಂಡಾವನ ಮತ್ತು ಪುರಂದರ ಕೋಟೆಗಳನ್ನು ವಶಪಡಿಸಿಕೊಂಡರು.
ಆದಿಲ್‌ಷಾಹಿ ಸುಲ್ತಾನರೊಡನೆ ಪುರಂದರ ಕದನ, ಪ್ರತಾಪಗಢ ಕದನ, ಕೊಲ್ಲಾಪುರ ಕದನ ಮೊದಲಾದ ಹೋರಾಟಗಳನ್ನು ನಡೆಸಿದರು.
ಮೊಘಲರೊಡನೆ ನಡೆದ ಪ್ರಮುಖ ಸಂಘರ್ಷಗಳು
1650ರಲ್ಲಿ ಮೋಘಲ ಗಡಿ ಪ್ರದೇಶಗಳ ಮೇಲೆ ದಾಳಿ ಮಾಡಿದರು. 1660-63 ರಲ್ಲಿ ಶಾಹಿಸಖಾನನ ಸೈನ್ಯವನ್ನು ಹಿಮ್ಮೆಟ್ಟಿಸಿದರು. 1664ರಲ್ಲಿ ಸೂರತ್ ನಗರದ ಮುತ್ತಿಗೆ ಹಾಕಿದರು. 1665ರಲ್ಲಿ ಜಯಸಿಂಗನ ದಾಳಿ ಮತ್ತು ಪುರಂದರ ಒಪ್ಪಂದ
1666ರಲ್ಲಿ ಆಗ್ರಾದ ಭೇಟಿ, ಬಂಧನ ಮತ್ತು ಬಂಧನದಿಂದ ಪಾರು.
ಸಿಂಹಾಸನರೋಹಣ
1674ರಲ್ಲಿ ರಾಯಗಡದ ಕೋಟೆಯಲ್ಲಿ ಸಿಂಹಾಸನ ಅಲಂಕರಿಸಿ ಛತ್ರಿಪತಿ ಎಂಬ ಬಿರುದನ್ನು ಪಡೆದರು. “ಗೋ ಬ್ರಾಹ್ಮಣ” ಪ್ರತಿಪಾಲಕ ಎಂದು ಶಿವಾಜಿಯನ್ನು ಘೋಷಿಸಲಾಯಿತು.
ಆಡಳಿತ ಪದ್ಧತಿ
ಶಿವಾಜಿಯ ಆಡಳಿತದಲ್ಲಿ ಸಹಾಯ ಮಾಡಲು ಅಷ್ಟಪ್ರಧಾನರೆಂಬ 8 ಜನ ಮಂತ್ರಿಗಳ ಒಂದು ಮಂಡಳಿ ರಚಿಸಲಾಗಿತ್ತು. ಮುಖ್ಯಮಂತ್ರಿಯನ್ನು ಪೇಶ್ವೆ ಎಂದು ಕರೆಯಲಾಗುತ್ತಿತ್ತು. ಭೂ ಕಂದಾಯವೇ ರಾಜ್ಯದ ಪ್ರಮುಖ ಆದಾಯವಾಗಿತ್ತು. ರೈತರು ನೇರವಾಗಿ ತೆರಿಗೆಯನ್ನು ಪಾವತಿಸುವ ಪದ್ಧತಿ ಜಾರಿಗೆ ತರಲಾಗಿತ್ತು.
ಶಿವಾಜಿ ಮಹರಾಜರ ತತ್ವಗಳು ಅವರಲ್ಲಿರುವ ರಾಷ್ಟ್ರಪ್ರೇಮದ ಗುಣ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಲಿ. ಸನಾತನ ಧರ್ಮದ ಜ್ಯೋತಿ ವಿಶ್ವದೆಲ್ಲೆಡೆ ಪಸರಿಸುವಂತಾಗಲಿ. ಸರ್ವರಲ್ಲಿಯೂ ರಾಷ್ಟ್ರಾಭಿಮಾನದ ಗೌರವದ ಸಂಕೇತ ಮೂಡಿಬರಲಿ. ಆಗ ಮಾತ್ರ ಶಿವಾಜಿಯ ಆದರ್ಶ ಚಿರಂಜೀವಿಯಾಗಿ ಉಳಿಯಲು ಸಾಧ್ಯ.

✒️ಗಿರೀಶ್ ಛತ್ರಪತಿ, ಕಾರ್ಕಳ




















