ಕಾರ್ಕಳ : ಮಹಾಶಿವರಾತ್ರಿ ಪ್ರಯುಕ್ತ ಕಾರ್ಕಳ ಹೆಬ್ರಿ ಉಭಯ ತಾಲೂಕಿನ ಈಶ್ವರ ದೇವಸ್ಥಾನಗಳಲ್ಲಿ ಫೆ.18 ಶನಿವಾದಂದು ವಿಶೇಷ ಪೂಜೆ, ಪ್ರಾರ್ಥನೆ, ಭಜನಾ ಮಹೋತ್ಸವ ಕಾರ್ಯಕ್ರಮ ಜರುಗಿತು. ಭಕ್ತಾಭಿಮಾನಿಗಳು ಶ್ರದ್ಧಾಭಕ್ತಿಯಿಂದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದರು. ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 8 ಗಂಟೆಗೆ ಕವಾಟೋದ್ಘಾಟನೆ, ದಶವಿಧಿ ಸ್ನಾನ, ಶಿವರಾತ್ರಿ ಉತ್ಸವದ ಉದ್ದಿಶ್ಯ ವಿಶೇಷ ರುದ್ರಾಭಿಷೇಕ, ನವಕಪ್ರಧಾನ ಹೋಮ, ಕಲಶಾಭಿಷೇಕ, ಚೂರ್ಣೋತ್ಸವ, ಮಹಾಪೂಜೆ, ಪಲ್ಲಪೂಜೆ ಜರುಗಿತು. ಸಂಜೆ 5 ಗಂಟೆಯಿಂದ ಸಂಗೀತ ಸೌರಭ, 6 ಗಂಟೆಯಿಂದ ಬಲಿ, ವಸಂತ ಕಟ್ಟೆಪೂಜೆ, ಓಕುಳಿ, ಅವಭೃತೋತ್ಸವ, ಅಗ್ನಿ ಕೇಳಿ ದೈವಗಳ ಭೇಟಿ, ಧ್ವಜ ಅವರೋಹಣ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಭಜನೆ, ಶ್ರೀ ಕ್ಷೇತ್ರದ ಧರ್ಮದೈವಗಳಿಗೆ ನೇಮೋತ್ಸವ ನಡೆಯಿತು. ವೇ. ಮೂ. ಎಡಪದವು ಮುರಳಿಧರ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಜರುಗಿತು.
ಪೆರ್ವಾಜೆ ದೇವಸ್ಥಾನ
ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶನಿಪೂಜೆ, ರಂಗಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಹರಿಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರುಶನ ಪಡೆದು ಕೃತಾರ್ಥರಾದರು.
ಪರ್ಪಲೆಗಿರಿ
ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯಲ್ಲಿ ಶಿವಜಾಗರಣೆ ಪ್ರಯುಕ್ತ ಸಂಜೆ 6 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಭಜನೆಗೆ ಚಾಲನೆ ನೀಡಿದರು. ಭಾನುವಾರ ಬೆಳಿಗ್ಗೆ ತನಕ ನಡೆಯಲಿರುವ ಭಜನೆಯಲ್ಲಿ ವಿವಿಧ ಭಜನಾ ತಂಡಗಳು ಭಾಗವಹಿಸಿದವು.
ಬೀದಿ ಬೈಲೂರು
ಬೈಲೂರು ಗ್ರಾಮದ ಬೀದಿ ಬೈಲೂರು ಶ್ರೀ ಮಹಾಲಿಂಗೇಶ್ವರ ಸನ್ನಧಿಯಲ್ಲಿ ವೇ. ಮೂ. ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಮಹಾಶಿವರಾತ್ರಿ ಗೌಣೋತ್ಸವಾದಿಗಳು ಜರುಗಿತು. ಸಚಿವ ವಿ. ಸುನೀಲ್ ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವತಾನುಗ್ರಹಕ್ಕೆ ಪಾತ್ರರಾದರು. 5 ದಿನಗಳ ಕಾಲ ಗೌಣೋತ್ಸವ ಜರುಗಲಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮ, ಫೆ. 20ರಂದು ಕೊಡಮಣಿತ್ತಾಯ ನೇಮ, ಫೆ. 21ರಂದು ಬೈದರ್ಕಳ ನೇಮ, ಫೆ. 22ರಂದು ಜುಮಾದಿ – ಜುಮಾದಿ ಬಂಟ ನೇಮ ನಡೆಯಲಿದೆ.
ಶಿವಪುರ
ಶಿವಪುರ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ 7 ಗಂಟೆಗೆ ಶ್ರೀ ಶಂಕರ ಕಲಾ ಪ್ರತಿಷ್ಠಾನ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಶರಸೇತು ಬಂಧನ ಯಕ್ಷಗಾನ ತಾಳಮದ್ದಲೆ ಜರಗಿತು.






















