ತಾಯಿ ಮಗನನ್ನು ಬೇರ್ಪಡಿಸಲು ಸಾವಿಗೂ ಸಾಧ್ಯವಾಗಲಿಲ್ಲ!
ನಮಗೆಲ್ಲಾ ಬಾಲ್ಯದಲ್ಲಿ ಅಕ್ಬರ ಮತ್ತು ಬೀರಬಲ್ಲರ ಒಂದು ಕಥೆ ಹೇಳಲಾಗಿತ್ತು.
ಒಂದು ತಾಯಿ ಮಂಗವು ತನ್ನ ಪ್ರಾಣ ಉಳಿಸಿಕೊಳ್ಳಲು ನೀರಿನ ತೊಟ್ಟಿಯಲ್ಲಿ ತನ್ನದೇ ಮರಿಯನ್ನು ಕಾಲ ಬುಡಕ್ಕೆ ಹಾಕಿ ಮೆಟ್ಟಿ ನಿಂತ ಕಥೆ! ನಾವು ಅದೇ ಕಥೆಯನ್ನು ಸತ್ಯ ಎಂದು ನಂಬಿಕೊಂಡು ಬಂದವರು. ಆದರೆ ಅದು ಸುಳ್ಳು ಎಂದು ಸಾಬೀತು ಮಾಡುವ ಸಾವಿರಾರು ಘಟನೆಗಳು ನಮ್ಮ ಸುತ್ತ ಮುತ್ತ ನಡೆದಿವೆ. ಈಗಲೂ ನಡೆಯುತ್ತಿವೆ! ಮಗು ಹುಟ್ಟಿದಾಗ ವೈದ್ಯರು ತಾಯಿ ಮಗುವಿನ ಸಾವಯವ ಸಂಬಂಧವಾದ ಕರುಳ ಬಳ್ಳಿಯನ್ನು ಕತ್ತರಿಸುತ್ತಾರೆ. ಆದರೆ ನಮಗೆಲ್ಲರಿಗೂ ಆ ತಾಯಿ ಮಗುವಿನ ಭಾವನಾತ್ಮಕವಾದ ಬಂಧವು ಕೊನೆಯವರೆಗೂ ಉಳಿಯುತ್ತದೆ.
ಆ ತಾಯಿಯ ಕೊನೆಯ ಕ್ಷಣದ ಹೋರಾಟದ ಕಥೆ
ನಿನ್ನೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೋವು ಸೂಕ್ಷ್ಮ ಮನಸಿನವರನ್ನು ಅಲ್ಲಾಡಿಸಿಬಿಟ್ಟಿದೆ! ಮಧ್ಯಪ್ರದೇಶದ ಜಬ್ಬಲ್ಪುರದಲ್ಲಿ ಒಂದು ವಿಹಾರ ದೋಣಿಯು ನರ್ಮದಾ ನದಿಯಲ್ಲಿ ಮುಳುಗಿದಾಗ ಒಂದಷ್ಟು ಮಂದಿ ನೀರು ಪಾಲಾದ ಘಟನೆ. ಎಲ್ಲವೂ ಮುಗಿದ ನಂತರ ನರ್ಮದಾ ನದಿಯ ಪ್ರವಾಹದಲ್ಲಿ ತೇಲಿ ಬಂದ ಈ ದೃಶ್ಯ ನಮಗೆಲ್ಲರಿಗೂ ನೂರಾರು ಕಥೆ ಹೇಳಿತು.

ತಾಯಿಯ ಕೊನೆಯ ಪ್ರಾರ್ಥನೆ ದೇವರಿಗೆ ಕೇಳಿಸಿರಬಹುದೇ?
ಆ ತಾಯಿಯು ತನ್ನ ಉಸಿರು ಚೆಲ್ಲುವ ಸಂದರ್ಭದಲ್ಲಿ ಕೂಡ ಮಗುವಿನ ಪ್ರಾಣ ಉಳಿಸಲು ಮಾಡಿರಬಹುದಾದ ತೀವ್ರವಾದ ಹೋರಾಟದ ಘಟನೆಯು ಕಣ್ಣ ಮುಂದೆ ಬಂತು. ಆ ಅನನ್ಯ ತಾಯಿಯ ಪ್ರೀತಿ, ಚಡಪಡಿಕೆ, ನೋವು, ತನ್ನ ಉಸಿರು ಖಾಲಿ ಆಗ್ತಾ ಇದೆ ಎಂದು ಅರಿವಾದಾಗಲೂ ತನ್ನ ಮಗುವಿನ ಪ್ರಾಣ ಹೇಗಾದರೂ ಉಳಿಸಲೇಬೇಕು ಎಂಬ ಉತ್ಕಟವಾದ ಹಪಾಹಪಿ!
ಆ ಆರ್ದ್ರ ಭಾವದ ಹಿಂದೆ ಇರುವ ನೋವಿನ ಕಥೆ!
ತನ್ನ ಉಸಿರನ್ನಾದರೂ ಧಾರೆಯೆರೆದು ತನ್ನ ಮಗುವಿನ ಪ್ರಾಣ ಉಳಿಸು ದೇವರೇ ಎಂಬ ಪ್ರಾರ್ಥನೆ ಆ ತಾಯಿಯ ತುಟಿಗಳಿಂದ ಬಂದಿರಬಹುದೇ? ಆ ಪ್ರಾರ್ಥನೆಯು ದೇವರಿಗೆ ಆ ಕ್ಷಣದಲ್ಲಿ ಕೇಳಿಸದೇ ಹೋಗಿರಬಹುದೇ? ಆ ತಾಯಿಯ ಮುಖದ ಆ ಆರ್ದ್ರವಾದ ಭಾವದ ಹಿಂದೆ ಅದೆಷ್ಟು ಇಂಟೆನ್ಸ್ ಆದ ನೋವಿತ್ತು ಎಂಬುದನ್ನು ಕಲ್ಪನೆ ಮಾಡುವುದು ಕೂಡ ನನಗೆ ಕಷ್ಟ ಆಗ್ತಾ ಇದೆ!
ತಾಯಿ ಮಗುವಿನ ಬಂಧ ಕತ್ತರಿಸಲು ಸಾವಿಗೂ ಸಾಧ್ಯವಾಗಲಿಲ್ಲ!
ಆ ಕೊನೆಯ ಹೋರಾಟದಲ್ಲಿ ಕೂಡ ತನ್ನ ಮಗುವನ್ನು ಎದೆಗೆ ಅಪ್ಪಿ ಹಿಡಿದು ಉಸಿರು ಚೆಲ್ಲಿದ ಆ ಮಹಾಮಾತೆಗೆ ನಮ್ಮೆಲ್ಲರ ನೂರಾರು ನಮನಗಳು. ಅವರಿಬ್ಬರ ಬಂಧವನ್ನು ಬೇರ್ಪಡಿಸಲು ಸಾವಿಗೂ ಸಾಧ್ಯವಾಗಲಿಲ್ಲ ಮತ್ತು ಈ ಕರುಳು ಕತ್ತರಿಸುವ ದೃಶ್ಯವನ್ನು ನೋಡಲಾಗದೆ ತಾಯಿ ನರ್ಮದೆಯೂ ಕಣ್ಣೀರು ಸುರಿಸಿದಳು ಅನ್ನುವುದೇ ಭರತ ವಾಕ್ಯ!



















