–ತನ್ನ ಪ್ರಾಣ ಹೋದರೂ ಆ ಪೈಲಟ್ ನೂರಾರು ಜನರ ಪ್ರಾಣ ಉಳಿಸಿದ್ದು ಹೇಗೆ ?
–ವಿಮಾನ ಆಕಾಶದಲ್ಲೇ ಮೂರು ಸುತ್ತು ತಿರುಗಿದ್ದು ಏಕೆ?
ಬರಹ : ರಾಜೇಂದ್ರ ಭಟ್ ಕೆ.
ಕಾರ್ಕಳ : ವಿಂಗ್ ಕಮಾಂಡರ್ ದೀಪಕ್ ವಸಂತ್ ಸಾಠೆ ನಿನ್ನೆ ರಾತ್ರಿ ಕೇರಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದ ಏರ್ ಲೈನ್ಸ್ ಪೈಲಟ್. ಅವರು ಸುದೀರ್ಘ ಅವಧಿಗೆ ಭಾರತೀಯ ವಾಯುಸೇನೆಯ ಸೇವೆಯಲ್ಲಿ ಇದ್ದವರು. ವಾಯು ಸೇನೆಯ ಫೈಟರ್ ವಿಮಾನಗಳನ್ನು ಓಡಿಸುವುದರಲ್ಲಿ ಅವರು ಹತ್ತಾರು ವರ್ಷ ಅನುಭವ ಹೊಂದಿದ್ದರು. ಅವರಿದ್ದ ವಾಯುಸೇನೆ ಎಲ್ಲಾ ಯುದ್ಧಗಳಲ್ಲಿ ಅಜೇಯ ಆಗಿತ್ತು. ನಿವೃತ್ತಿಯ ನಂತರ ಅವರು ಬೇರೆಯವರ ಹಾಗೆ ಮನೆಯಲ್ಲಿ ಬೆಚ್ಚಗೆ ಕುಳಿತಿರಬಹುದಾಗಿತ್ತು. ಆದರೆ, ಒಬ್ಬ ಸೈನಿಕನ ತುಡಿತ ಅವರನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡಲ್ಲ. ನಿವೃತ್ತಿಯಾದ ನಂತರ ಅವರು HAL ಸಂಸ್ಥೆಯ ಟೆಸ್ಟ್ ಪೈಲಟ್ ಆಗಿ ದುಡಿದರು. ನೂರಾರು ಪೈಲಟ್ ಗಳಿಗೆ ತರಬೇತಿ ನೀಡಿದರು. ಇತ್ತೀಚೆಗೆ ಕೊರೊನಾ ಆತಂಕದ ನಡುವೆ ದುಬಾಯಿಯಲ್ಲಿ ಇರುವ ಸಂತ್ರಸ್ತ ಭಾರತೀಯರನ್ನು ಹಿಂದಕ್ಕೆ ಕರೆತರುವ ವಂದೇ ಭಾರತ್ ಮಿಷನ್ ಕಾರ್ಯಕ್ರಮದ ಅಂಗವಾಗಿ ಅವರನ್ನು ಪೈಲಟ್ ಆಗಿ ಭಾರತ ಸರಕಾರ ನಿಯೋಜನೆ ಮಾಡಿ ಕಳುಹಿಸಿತ್ತು. ಜೋರಾಗಿ ಸುರಿಯುತ್ತಿದ್ದ ಮಳೆ, ಜಾರುವ ದಾರಿ ಅಥವಾ ತಾಂತ್ರಿಕ ದೋಷ ಅವರನ್ನು ವಂಚಿಸಿ ವಿಮಾನ ಅಪಘಾತ ಉಂಟು ಮಾಡಿತು. ಅವರು ಪ್ರಾಣ ಕಳೆದುಕೊಂಡಿದ್ದಾರೆ.
ವಾಯುಸೇನೆಯ ವಿಂಗ್ ಕಮಾಂಡರ್
ಸಾಠೆ ಒಟ್ಟಾರೆ ವಿಮಾನ ಹಾರಾಟದಲ್ಲಿ 36 ವರ್ಷದ ಅನುಭವ ಹೊಂದಿದ್ದರು. ವಾಯುಪಡೆಯಲ್ಲೇ 21 ವರ್ಷಗಳ ಅನುಭವ ಇತ್ತು. 2005ರಲ್ಲಿ ಅವರು ವಾಯುಪಡೆಯಿಂದ ನಿವೃತ್ತರಾಗಿದ್ದರು. sword of honour ಗೌರವವನ್ನು ಅವರ ಧೀರೋದ್ಧಾತ ಸೇವೆಗೆ ಭಾರತೀಯ ಸೇನೆ ಕೊಟ್ಟಿತ್ತು. ಅವರ ಸಹೋದರ ಕ್ಯಾಪ್ಟನ್ ವಿಕಾಸ್ ಸಾಠೆಯವರೂ ಸೇನೆಯಲ್ಲಿದ್ದಾರೆ. ಒಟ್ಟಾರೆ ಇಡೀ ಕುಟುಂಬವೇ ದೇಶ ಸೇವೆಗೆ ಅರ್ಪಿಸಿಕೊಂಡಿದೆ.
ಭಾರತೀಯ ವಿಮಾನಗಳ ಖಾಲಿಯಾಗಿ ಹಾರುವುದಿಲ್ಲ
ವಂದೇ ಭಾರತ್ ಮಿಷನ್ ಗೆ ದುಬಾಯಿಗೆ ಹೊರಡುವಾಗ ಖಾಲಿ ವಿಮಾನ ತೆಗೆದುಕೊಂಡು ಹೋಗುತ್ತೀರಲ್ಲ ಎಂದು ಅವರ ಸ್ನೇಹಿತರು ಕೇಳಿದಾಗ ಹೌದು, ಏಕೆಂದರೆ ಅರಬ್ ದೇಶಗಳಲ್ಲಿ ಹೊರಗಿನ ಪ್ರಯಾಣಿಕರನ್ನು ಇಳಿಸಿಕೊಳ್ಳುವುದಿಲ್ಲ .ಆದರೆ ನಾವು ಅಲ್ಲಿಯ ಭಾರತೀಯರಿಗೆ ತರಕಾರಿ, ಹಣ್ಣು ಮತ್ತು ಔಷಧಿಗಳನ್ನು ತೆಗೆದುಕೊಂಡು ಹೋಗುತ್ತೇವೆ. ಯಾಕೆಂದರೆ ಭಾರತದ ವಿಮಾನಗಳು ಎಂದಿಗೂ ಖಾಲಿ ಹೋಗುವುದಿಲ್ಲ ಎಂದು ಹೇಳಿ ವಿಮಾನ ಹತ್ತಿದ್ದರು.
ಆ. 7ರ ರಾತ್ರಿ ಏನಾಯಿತು ?
ಆ.7ರ ರಾತ್ರಿ ಏನಾಯಿತೆಂದರೆ ವಿಮಾನ ಇಳಿಯುವಾಗ ತಾಂತ್ರಿಕ ದೋಷಗಳು ಕಂಡುಬಂತು. ಲ್ಯಾಂಡಿಂಗ್ ಆಗುವ ಗಿಯರ್ ಗಳು ಕೆಲಸ ಮಾಡುತ್ತಿರಲಿಲ್ಲ. ಇದನ್ನುಅರಿತ ದೀಪಕ್ ಸಾಠೆಯವರು ಆಕಾಶದಲ್ಲಿಯೇ ವಿಮಾನವನ್ನು ಮೂರು ಸುತ್ತು ತಿರುಗಿಸಿದರು. ಇದರಿಂದ ವಿಮಾನದ ಇಂಧನ ಹೆಚ್ಚುಕಡಿಮೆ ಖಾಲಿಯಾಯಿತು. ಇದರಿಂದ ವಿಮಾನ ಅಪಘಾತ ಆದರೂ, ಬೆಂಕಿ ಹೊತ್ತಿಕೊಳ್ಳಲಿಲ್ಲ ಮತ್ತು ಅಪಘಾತ ಸ್ಥಳದಲ್ಲಿ ಹೊಗೆ ಇರಲಿಲ್ಲ. ವಿಮಾನ ಭೂಸ್ಪರ್ಶ ಆಗುವ ಸಂದರ್ಭದಲ್ಲಿ ಅವರು ವಿಮಾನದ ಎಂಜಿನ್ ಅನ್ನು ಆಫ್ ಮಾಡಿದ್ದರು. ಇದರಿಂದ ವಿಮಾನ ಇಬ್ಭಾಗ ಆದರೂ ಬೆಂಕಿ ಹೊತ್ತಿಕೊಳ್ಳಲಿಲ್ಲ. ಇದರಿಂದ ನೂರಾರು ಯಾತ್ರಿಕರ ಪ್ರಾಣ ಉಳಿಯಿತು. ವಿಂಗ್ ಕಮಾಂಡರ್ ದೀಪಕ್ ಸಾಥೆ ಅವರ ಆತ್ಮಕ್ಕೆ ಟೀಮ್ ನ್ಯೂಸ್ ಕಾರ್ಕಳ ಚಿರಶಾಂತಿ ಕೋರುತ್ತದೆ.