ನವದೆಹಲಿ : ಬಾಕಿ ಉಳಿಸಿಕೊಳ್ಳಲಾಗಿರುವ ಜಿಎಸ್ಟಿ ಪರಿಹಾರದ ಹಣವಾದ ರೂ. 16,982 ಕೋಟಿ ಅನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಫೆ.18ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವೆ ಈ ಸಂಗತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಇವತ್ತಿನವರೆಗೆ ಜಿಎಸ್ಟಿ ಪರಿಹಾರದ ಬಾಕಿ ಉಳಿದಿರುವ ಹಣವನ್ನು ತೀರಿಸಲಾಗುವುದು. ಅಂದರೆ ಜಿಎಸ್ಟಿ ಪರಿಹಾರದ ಇಡೀ ಬಾಕಿ ಮೊತ್ತವಾದ ರೂ. 16,982 ಕೋಟಿ ಅನ್ನು ತುಂಬಿಸಿಕೊಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಪರಿಹಾರ ನಿಧಿಯಲ್ಲಿ ಈ ಹಣ ಇಲ್ಲದಿದ್ದರೂ ನಮ್ಮ ಸ್ವಂತ ಸಂಪನ್ಮೂಲಗಳ ಮೂಲಕ ಈ ಹಣವನ್ನು ಬಿಡುಗಡೆ ಮಾಡುತ್ತೇವೆ. ಭವಿಷ್ಯದ ಸೆಸ್ ಸಂಗ್ರಹದ ಮೂಲಕ ಈ ಹಣವನ್ನು ಮರಳಿ ತುಂಬಿಸಿಕೊಳ್ಳಲಾಗುವುದು ಎಂದೂ ಕೇಂದ್ರ ಹಣಕಾಸು ಸಚಿವೆ ತಿಳಿಸಿದ್ದಾರೆ. ನವದೆಹಲಿಯಲ್ಲಿ ಇಂದು ನಡೆದ 49ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಪಾಲ್ಗೊಂಡಿದ್ದರು.
ಜಿಎಸ್ಟಿ ಪರಿಹಾರದ ಎಲ್ಲಾ ಹಣ ಕೇಂದ್ರದಿಂದಲೇ ಪಾವತಿ



















