ಕಾನೂನು ಕಣಜ : ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ಬಂಧನ

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಪ್ರಕ್ರಿಯೆಯು ಒಂದು ಮುಖ್ಯವಾದ ಅಂಗವಾಗಿರುತ್ತದೆ. ಈ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸುವ ಸಂಬಂಧಪಟ್ಟ ಪೋಲೀಸ್ ಅಧಿಕಾರಿಯು ತನ್ನ ಜವಾಬ್ದಾರಿಯನ್ನು ನಿಷ್ಟೆಯಿಂದ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗುತ್ತದೆ. ಅರಿಯಬಲ್ಲ ಅಪರಾಧಿಕ ಕೃತ್ಯ ಅಂದರೆ ಕೋಗ್ನಿಸೀಬಲ್ ಅಪರಾಧಿಕ ಕೃತ್ಯಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಆರೋಪಿಯನ್ನು ಪೋಲೀಸ್ ಅಧಿಕಾರಿ ದಸ್ತಗಿರಿ ಮಾಡಲು ನ್ಯಾಯಾಲಯದಿಂದ ವಾರೆಂಟ್ ಬೇಕಾಗಿರುವುದಿಲ್ಲ. ಆದರೆ ಅರಿಯಲಾಗದ ಅಪರಾಧಿಕ ಕೃತ್ಯಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಆರೋಪಿಯನ್ನು ಪೋಲೀಸ್ ಅಧಿಕಾರಿ ನ್ಯಾಯಾಲಯದಿಂದ ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರ ಹೊಂದಿರುವುದಿಲ್ಲ. ಕ್ರಿಮಿನಲ್ ಪ್ರಕರಣದಲ್ಲಿ ಕರ್ತವ್ಯನಿರತ ಪೋಲೀಸ್ ಅಧಿಕಾರಿಯು ಅಪರಾಧಿಕ ಕೃತ್ಯದ ಕುರಿತು ಮಾಹಿತಿಯನ್ನು ಪಡೆದ ಕೂಡಲೇ ಮೊದಲು ಪ್ರಕರಣವನ್ನು ದಾಖಲಿಸಿ ಆ ನಂತರ ಅಪರಾಧಿಕ ಕೃತ್ಯದ ಕುರಿತು ತನಿಖೆಯನ್ನು ಕೈಗೊಳ್ಳಬೇಕಾಗಿರುವುದು ಕಾನೂನು ಬದ್ಧ ನಿಯಮವಾಗಿರುತ್ತದೆ. ಆರೋಪಿಯ ಬಂಧನವು ಪ್ರಕರಣದ ತನಿಖೆಯ ಒಂದು ಭಾಗವಾಗಿರುವುದರಿಂದ ಯಾವುದೇ ಪೋಲೀಸ್ ಅಧಿಕಾರಿಯು ತಾನು ಹೊಂದಿರುವ ಅಪರಾಧಿಕ ಕೃತ್ಯದ ಮಾಹಿತಿಯ ಆದಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳದೇ ಯಾವುದೇ ವ್ಯಕ್ತಿಯನ್ನು ಬಂಧಿಸುವಂತಿಲ್ಲ. ಈ ಹಿನ್ನಲೆಯಲ್ಲಿ ಕರ್ತವ್ಯನಿರತ ಪೋಲೀಸ್ ಅಧಿಕಾರಿಯು ಅಪರಾದ ಕೃತ್ಯದ ಬಗ್ಗೆ ತನಗೆ ಮಾಹಿತಿ ದೊರೆತ ತಕ್ಷಣ ಮಾಹಿತಿಯನ್ನು ನಿಯಮಾನುಸಾರವಾಗಿ ದಾಖಲಿಸಿಕೊಳ್ಳದೆ ಘಟನಾ ಸ್ಥಳಕ್ಕೆ ದಾವಿಸಿ ತನಿಖೆ ನಡೆಸುವುದು ಸರಿಯಾದ ಕ್ರಮವಾಗಿರುವುದಿಲ್ಲ. ಆದರೆ ತಾನು ಹೊಂದಿರುವ ಅಪರಾಧಿಕ ಕೃತ್ಯದ ಮಾಹಿತಿಯು ಅರಿಯಬಲ್ಲ ಅಪರಾಧಿಕ ಕೃತ್ಯಕ್ಕೆ ಸಂಬಂಧಪಟ್ಟದ್ದೇ ಅಥವಾ ಅರಿಯಲಾಗದ ಅಪರಾಧಿಕ ಕೃತ್ಯಕ್ಕೇ ಸಂಬಂಧಪಟ್ಟಿದ್ದೇ ಎಂಬುವುದನ್ನು ದೃಢಪಡಿಸಿಕೊಳ್ಳಲು ಕರ್ತವ್ಯನಿರತ ಪೋಲೀಸ್ ಅಧಿಕಾರಿಯು ಮೊದಲ ಮಾಹಿತಿ ವರದಿಯನ್ನು (ಎಫ್.ಐ.ಆರ್) ದಾಖಲಿಸುವ ಮೊದಲೇ ಘಟನಾ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ. ಈ ವಿಷಯವನ್ನು ಕರ್ತವ್ಯನಿರತ ಪೋಲೀಸ್ ಅಧಿಕಾರಿಯು ಮೊದಲ ಮಾಹಿತಿ ವರದಿಯಲ್ಲಿ ದಾಖಲಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ.

ಯಾವುದೇ ಕರ್ತವ್ಯನಿರತ ಪೋಲೀಸ್ ಅಧಿಕಾರಿಯು ತನ್ನ ಠಾಣೆಯ ಕ್ಷೇತ್ರ ವ್ಯಾಪ್ತಿ ಅಂದರೆ ಸರಹದ್ದಿನ ಹೊರಗಿನ ಪ್ರದೇಶದಲ್ಲಿ ಅಪರಾಧಿಕ ಕೃತ್ಯದ ಬಗ್ಗೆ ಮಾಹಿತಿಯನ್ನು ಹೊಂದಿದಾಗ, ಅಂತಹ ಅಪರಾಧಿಕ ಕೃತ್ಯವು ಅರಿಯಬಲ್ಲ ಅಪರಾಧಿಕ ಕೃತ್ಯವೆಂದು ಕಂಡುಬಂದಲ್ಲಿ ಮೊದಲ ಮಾಹಿತಿ ವರದಿ (ಎಫ್.ಐ.ಆರ್) ಯನ್ನು ದಾಖಲಿಸಬಹುದಾಗಿದೆ. ಯಾವುದೇ ಕರ್ತವ್ಯನಿರತ ಪೋಲೀಸ್ ಅಧಿಕಾರಿಯು ತನ್ನ ಠಾಣೆಯ ಕ್ಷೇತ್ರ ವ್ಯಾಪ್ತಿಯ ಹೊರಗಿನ ಪ್ರದೇಶದಲ್ಲಿ ನಡೆದ ಅರಿಯಬಲ್ಲ ಅಪರಾಧಿಕ ಕೃತ್ಯದ ಮಾಹಿತಿಯನ್ನು ಪಡೆದ ಸಂದಂರ್ಭದಲ್ಲಿ ಸಹ ಅಂತಹ ಮಾಹಿತಿಯನ್ನು ದಾಖಲಿಸಿಕೊಂಡು ಅದನ್ನು ಕ್ಷೇತ್ರ ವ್ಯಾಪ್ತಿಯ ಅಧಿಕಾರ ಹೊಂದಿರುವ ಪೋಲೀಸ್ ಠಾಣೆಗೆ ವರ್ಗಾಯಿಸಬೇಕಾಗಿರುವುದು ಕರ್ತವ್ಯನಿರತ ಪೋಲೀಸ್ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.

ಅಪರಾಧಿಕ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ದಸ್ತಗಿರಿ ಮಾಡುವ ಸಮಯದಲ್ಲಿ ಕರ್ತವ್ಯನಿರತ ಪೋಲೀಸ್ ಅಧಿಕಾರಿಯು ಬಂಧಿಸಲ್ಪಡುವ ವ್ಯಕ್ತಿಯನ್ನು ಸ್ಪಷ್ಟವಾಗಿ ಗುರುತಿಸಿ ಈ ಬಗ್ಗೆ ನಿಖರವಾದ ಕಾರಣ ಮತ್ತಿತರ ವಿವರವನ್ನು ದಸ್ತಗಿರಿ ಟಿಪ್ಪಣಿಯಲ್ಲಿ ನಮೂದಿಸಿ ಸಿದ್ಧಗೊಳಿಸಿದ ಟಿಪ್ಪಣಿಗೆ ಅಲ್ಲಿಯ ಪ್ರದೇಶದ ಅಥವಾ ಬಂಧಿಸಲ್ಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯ ಅಥವಾ ಪ್ರದೇಶದ ಗಣ್ಯವ್ಯಕ್ತಿಯ ಸಾಕ್ಷಿಯನ್ನು ಹಾಗೂ ಬಂಧನಕ್ಕೀಡಾದ ವ್ಯಕ್ತಿಯ ಸಹಿಯನ್ನು ಪಡೆದುಕೊಳ್ಳಬೇಕು. ಮಾತ್ರವಲ್ಲದೆ ಮತ್ತು ಬಂಧನಕ್ಕೊಳಗಾದ ವ್ಯಕ್ತಿಗೆ ಆತನು ಮಾಡಿರುವ ತಪ್ಪನ್ನು ತಿಳಿಸಿ ಬಂಧನದ ವಿಷಯವನ್ನು ಬಂಧಿತ ವ್ಯಕ್ತಿಯ ಹತ್ತಿರದ ಸಂಬಂಧಿಗೆ ಅಥವಾ ಸ್ನೇಹಿತನಿಗೆ ತಿಳಿಸಬೇಕಾಗುತ್ತದೆ ಮಾತ್ರವಲ್ಲದೆ ಬಂಧಿಸಲ್ಪಟ್ಟ ವ್ಯಕ್ತಿಯು ತಾನು ಕಾನೂನಿನ ನಿಯಾಮಾನುಸಾರವಾಗಿ ಜಾಮೀನು ಮೂಲಕ ಬಿಡುಗಡೆ ಹೊಂದಲು ಸೂಕ್ತ ಕ್ರಮ ಕೈಗೊಳ್ಳಲು ಆತನ ವಕೀಲರನ್ನು ಸಂಪರ್ಕಿಸಲು ಅನುವುಮಾಡಿಕೊಡಬೇಕಾಗುತ್ತದೆ.

✒️ ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681









































































































error: Content is protected !!
Scroll to Top