ಉಡುಪಿ: ಕೊಬ್ಬರಿ ಘಟಕವೊಂದರಲ್ಲಿ ಶನಿವಾರ ನಸುಕಿನ ವೇಳೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಘಟನೆ ಕಾಪು ತಾಲೂಕಿನ ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದಿದೆ.
ನಳಿನಿ ಪುಷ್ಪಲತಾ ಸಾಲಿನ್ಸ್ ಮಾಲೀಕತ್ವದ ಅಂಗಡಿ ಇದಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿದೆ ಎನ್ನಲಾಗುತ್ತಿದ್ದು, ಕ್ಷಣ ಮಾತ್ರದಲ್ಲಿ ಒಣ ಕೊಬ್ಬರಿ ದಾಸ್ತಾನು ಮಾಡುವ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ.
ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ತಗುಲುವ ಸಂಭವನೀಯ ಅಪಾಯ ತಪ್ಪಿದೆ.

ಘಟನೆಯಲ್ಲಿ ಸುಮಾರು ಹತ್ತರಿಂದ ಹದಿನೈದು ಲಕ್ಷ ರೂ. ಮೌಲ್ಯದ ವಸ್ತುಗಳು ನಷ್ಟವಾಗಿದೆ ಎಂದು ಊಹಿಸಲಾಗಿದೆ.












































































