ಸೆ. 26 ರಂದು ಕಾರಂತ ಥೀಮ್ ಪಾರ್ಕ್ ಕೋಟಾದಲ್ಲಿ ಪ್ರಶಸ್ತಿ ಪ್ರದಾನ
ಹೆಬ್ರಿ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಕನ್ನಡ ಬೋಧನಾ ಕ್ಷೇತ್ರದಲ್ಲಿನ ಸಾಧನೆಗೆ ಪಿ.ಆರ್.ಎನ್. ಅಮೃತ ಭಾರತಿ ವಿದ್ಯಾಲಯದ ಉಪ ಮುಖ್ಯೋಪಾಧ್ಯಾಯ, ಕನ್ನಡ ಶಿಕ್ಷಕ ಚಾರದ ಮಹೇಶ ಹೈಕಾಡಿ ಅವರಿಗೆ ‘ಡಾ. ಶಿವರಾಮ ಕಾರಂತ ಉತ್ತಮ ಶಿಕ್ಷಕ ಪ್ರಶಸ್ತಿ’ ಲಭಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಹೇಶ ಹೈಕಾಡಿಯವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಕನ್ನಡ ಭಾಷಾ ಕಲಿಕೆ, ಸಾಹಿತ್ಯಾಸಕ್ತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಕನ್ನಡ ವಿಷಯದ ಬೋಧನೆಯಲ್ಲಿ ಹೊಸತನದ ಪ್ರಯೋಗಗಳನ್ನು ಅಳವಡಿಸಿಕೊಂಡು, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಶಾಲಾ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಸಂಘಟನೆ ಮತ್ತು ಅನುಷ್ಠಾನದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ವಿದ್ಯಾರ್ಥಿ–ಶಿಕ್ಷಕ–ಪೋಷಕರ ನಡುವಿನ ಶೈಕ್ಷಣಿಕ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಶಿಕ್ಷಣ ಸೇವೆ, ಕನ್ನಡ ಭಾಷಾ ಬೋಧನೆ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ಡಾ. ಶಿವರಾಮ ಕಾರಂತ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮಹೇಶ ಹೈಕಾಡಿ ಅವರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿತೈಷಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಡಾ. ಶಿವರಾಮ ಕಾರಂತ ಪ್ರತಿಷ್ಠಾನ, ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಹಾಜಿ ಅಬ್ದುಲ್ಲಾ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಉಡುಪಿ, ಎಸ್ ಕ್ರೀಟ್ ಅಡೇಷನ್ಸ್ ಹಾಗೂ ಉಸಿರು ಕೋಟ ಇವರ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದ್ದು, ಸೆ. 26 ರಂದು ಶನಿವಾರ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.










































































