ಕಾರ್ಕಳ: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಸ್ಥಾನಮಾನ ನೀಡಿ ಘೋಷಣೆ ಮಾಡಿರುವುದು ಸಮಸ್ತ ತುಳುನಾಡಿನ ಜನತೆಗೆ ಮತ್ತು ತುಳು ಭಾಷೆಗೆ ನೀಡಿದ ದೊಡ್ಡ ಗೌರವವಾಗಿದೆ.
ಇದು ಸಮಸ್ತ ತುಳುವರ ಅನೇಕ ವರ್ಷದ ಕನಸು,ಇದಕ್ಕಾಗಿ ನಮ್ಮ ತುಳುನಾಡಿನ ಅನೇಕ ನಾಯಕರು ವಿಶೇಷ ಹೋರಾಟವನ್ನು ಮಾಡಿರುತ್ತಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಸಚಿವರಾಗಿದ್ದ ವಿ. ಸುನಿಲ್ ಕುಮಾರ್ ಅವರು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ ತುಳುವಿನ ಬಗ್ಗೆ ಅಧ್ಯಯನ ನಡೆಸಿ ತುಳು ಭಾಷೆಗೆ ವಿಶೇಷ ಸ್ಥಾನಮಾನ ನೀಡುವ ವರದಿಯನ್ನು ನೀಡಿತ್ತು. ಈ ವಿಚಾರವಾಗಿ ನಮ್ಮ ತುಳುನಾಡ ಟ್ರಸ್ಟ್ ಉಳ್ಳಾಲ ಇದರ ಸ್ಥಾಪಕ ಅಧ್ಯಕ್ಷ ಜಿ. ವಿ. ಎಸ್. ಉಳ್ಳಾಲ್ ಮತ್ತು ಬೇರೆ ಬೇರೆ ತುಳುವ ಸಂಘಟನೆಗಳು ಹೆಚ್ಚಿನ ಹೋರಾಟವನ್ನು ಮಾಡಿವೆ. ಅದನ್ನೂ ಪರಿಗಣಿಸಿ ಅದರ ಆಧಾರದ ಮೇಲೆ ಈಗಿನ ಸರ್ಕಾರದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವಂಥದ್ದು ಸಮಸ್ತ ತುಳುವರಿಗೆ ಸಂತಸ ತಂದಿದೆ.
ಈ ವಿಚಾರವಾಗಿ ವಿಶ್ವ ತುಳುವ ಮಹಾಸಭಾ ಸಂಸ್ಥೆ ಅನೇಕ ವರ್ಷಗಳಿಂದ ಬೇರೆ ಬೇರೆ ರೂಪದ ಹೋರಾಟವನ್ನು ಮಾಡುತ್ತಾ ಬಂದಿದ್ದು ಇಂದು ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ವಿಶ್ವ ತುಳುವ ಮಹಾಸಭೆಯು ಆಭಾರಿಯಾಗಿದೆ.

ಈ ವಿಚಾರವಾಗಿ ಮುತುವರ್ಜಿ ವಹಿಸಿದ್ದ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ವಿ ಸುನಿಲ್ ಕುಮಾರ್, ಡಾ. ಮೋಹನ್ ಆಳ್ವ, ಈಗಿನ ಸರಕಾರದ ಮಂತ್ರಿಗಳಾದ ಯು.ಟಿ. ಖಾದರ್, ಶಾಸಕ ಅಶೋಕ್ ರೈ, ಈಗಿನ ನಮ್ಮ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಸಂಸದರಿಗೆ, ನಮ್ಮ ತುಳುನಾಡು ಟ್ರಸ್ಟ್ ಉಳ್ಳಾಲ ಇದರ ಸ್ಥಾಪಕ ಅಧ್ಯಕ್ಷರು ಜಿ. ವಿ. ಎಸ್. ಉಳ್ಳಾಲ್ ಅವರಿಗೆ ಹಾಗೂ ವಿಚಾರವಾಗಿ ಹೋರಾಟ ಮಾಡಿದ ಎಲ್ಲಾ ತುಳುವ ಸಂಘಟನೆಗಳಿಗೆ ಮತ್ತು ಹೋರಾಟಗಾರರಿಗೆ ವಿಶ್ವ ತುಳುವ ಮಹಾಸಬೆ ಆಭಾರಿಯಾಗಿದೆ ಎಂದು ವಿಶ್ವ ತುಳುವ ಮಹಾಸಭಾದ ಅಂತರಾಷ್ಟ್ರೀಯ ಅಧ್ಯಕ್ಷರು ಸರ್ವೋತ್ತಮ ಶೆಟ್ಟಿ, ವಿಶ್ವ ತುಳುವ ಫೌಂಡೆಶನ್‌ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ವಿಶ್ವ ತುಳುವ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ, ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಉಡುಪಿ ಜಿಲ್ಲಾಧ್ಯಕ್ಯ ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ, ಕಾರ್ಕಳ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಅವರು ವಿಶ್ವ ತುಳುವ ಮಹಾಸಭಾ ಸಂಸ್ಥೆಯ ಮುಖೇನ ಕೃತಜ್ಞತೆ ಸಲ್ಲಿಸಿದ್ದಾರೆ.



































