ಚಿಕ್ಕಮಗಳೂರು : ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಜಯಂತಿ ಆಚರಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಇಬ್ಬರು ಅರ್ಚಕರು ಸೇರಿದಂತೆ ಐವರಿಗೆ ಅಂಗರಕ್ಷರನ್ನ ನೇಮಿಸಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆದೇಶ ಹೊರಡಿಸಿದ್ದಾರೆ.
ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಇಬ್ಬರು ಅರ್ಚಕರಾದ ಶ್ರೀಧರ್ ಪೂಜಾರ್, ಶಿವಾರಂ, ಇಬ್ಬರು ಮುಜಾವರ್ಗಳಾದ ಸೈಯದ್ ಅಖಿಲ್ ಪಾಷ, ಇಸ್ಮಾಯಿಲ್ ಹಾಗೂ ವ್ಯವಸ್ಥಾಪನ ಸಮಿತಿ ಮುಸ್ಲಿಂ ಸದಸ್ಯ ಭಾಷಾ ಅವರಿಗೆ ಒಬ್ಬೊಬ್ಬ ಅಂಗರಕ್ಷಕರನ್ನು ನೇಮಿಸಲಾಗಿದೆ.
ದತ್ತ ಜಯಂತಿ ಆಚರಣೆ ಹಿನ್ನೆಲೆ 15 ದಿನಗಳ ಕಾಲ ಐವರ ಭದ್ರತೆಗಾಗಿ ಗನ್ಮ್ಯಾನ್ಗಳನ್ನು ನೇಮಕ ಮಾಡಲಾಗಿದೆ. ದಿನದ 24 ಗಂಟೆಗಳ ಕಾಲವೂ ಭದ್ರತೆ ನೀಡಲಾಗುತ್ತದೆ. ಅರ್ಚಕರ ಮೂಲ ವಿಳಾಸ, ಚಿಕ್ಕಮಗಳೂರಿನ ನಿವಾಸಿಗಳ ಬಗ್ಗೆ ಗೌಪ್ಯತೆ ಕಾಪಾಡಲು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇರುವ ದತ್ತಪೀಠ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ನಡೆಸಲಾಗುತ್ತಿದೆ. ಈ ದತ್ತ ಜಯಂತಿಗೆ ಡಿಸೆಂಬರ್ 17 ರಂದು ಚಾಲನೆ ನೀಡಲಾಗಿದೆ. ಡಿ. 26 ರ ವರೆಗೆ ನಡೆಯಲಿರುವ ದತ್ತಜಯಂತಿಗೆ ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ದತ್ತಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಸಿ.ಟಿ.ರವಿ ಸೇರಿದಂತೆ ಜಿಲ್ಲೆಯಾದ್ಯಂತ 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ದಾರೆ.
ದತ್ತ ಜಯಂತಿ ಆಚರಣೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮಾಲಾಧಾರಿಗಳು ಡಿ. 26ರಂದು ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ 30,000ಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಪಾದುಕೆ ದರ್ಶನ ಪಡೆದು ಹೋಮ ಹವನ ಮಾಡಲಿದ್ದಾರೆ.







































































