ಹೆಬ್ರಿ – ಅಕ್ಷರ ಸಾಹಿತ್ಯ ಸಂಭ್ರಮ

ಹೆಬ್ರಿ : ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಅಕ್ಷರ ಸಾಹಿತ್ಯ ಸಂಘ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರು, ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕ, ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಹೆಬ್ರಿ ಘಟಕ, ಜೇಸಿಐ ಹೆಬ್ರಿ ಇವರ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.7ರಂದು ಶಾಲಾ ಸಭಾಂಗಣದಲ್ಲಿ ಅಕ್ಷರ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.

ಹೆಬ್ರಿಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಆಶಾ ಬಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕನ್ನಡವು ವೈವಿಧ್ಯತೆಯ ಭಾಷೆಯಾಗಿದ್ದು, ಪ್ರಾದೇಶಿಕ ಸೊಗಡು ಇದರ ಜೀವಾಳ. ಶಾಲೆಗಳಲ್ಲಿ ಅಕ್ಷರ ಸಾಹಿತ್ಯ ಸಂಘಗಳಂತಹ ಕನ್ನಡ ಸಂಘಗಳ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮ ಮೂಡಿಸುವುದು ಶ್ಲಾಘನೀಯ ಎಂದರು.

ನಿಯೋಜಿತ ಭಾಷಣಕಾರ ಮಹೇಶ ಹೈಕಾಡಿ ಚಾರ ಮಾತನಾಡಿ, ಪ್ರಾಚೀನ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವ ಕನ್ನಡ ನಾಡು ನುಡಿ ನಮ್ಮ ಹೆಮ್ಮೆ. ಕನ್ನಡದ ಕುರಿತು ಅಭಿಮಾನದ ಜೊತೆ ಕನ್ನಡಕ್ಕಾಗಿ ಕೆಲಸ ಮಾಡುವ ಮನಸ್ಸು ಬೇಕು. ವಿದ್ಯಾರ್ಥಿಗಳಲ್ಲಿ ಕನ್ನಡದ ಪ್ರೀತಿಯನ್ನು ಬೆಳೆಸುವಲ್ಲಿ ಯಶಸ್ವಿಯಾದರೆ ಭಾಷೆ ಬೆಳೆಯುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮಾತನಾಡಿ, ಕನ್ನಡ ಪೂರ್ವದ ಹಳೆಗನ್ನಡದಿಂದ ಪ್ರಾರಂಭಿಸಿ ಇಂದಿನವರೆಗೂ ಸಮೃದ್ದತೆಯನ್ನು ಉಳಿಸಿಕೊಂಡ ಗಟ್ಟಿತನವುಳ್ಳ ಭಾಷೆ. ಭಾಷಾ ಮಾಧ್ಯಮದ ಗೊಂದಲವಿಲ್ಲದೆ ಎಲ್ಲರೂ ಕನ್ನಡವನ್ನು ಮಾತನಾಡುವ ಭಾಷೆ ಮತ್ತು ಹೃದಯದ ಭಾಷೆಯಾಗಿಸಿದಾಗ ಕನ್ನಡವು ಬೆಳೆಯುತ್ತದೆ. ಕನ್ನಡ ರಾಜ್ಯೋತ್ಸವ ಕನ್ನಡಿಗರೆಲ್ಲರ ಹಬ್ಬ. ಅಕ್ಷರ ಸಾಹಿತ್ಯ ಸಂಘವು ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿಯನ್ನು ಬೆಳೆಸುವ ಕಾರ್ಯಕ್ರಮವನ್ನು ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಉಪನ್ಯಾಸ, ವಿದ್ಯಾರ್ಥಿಗಳಿಂದ ಗಾಯನ, ಭಾಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಮಹೇಶ ಹೈಕಾಡಿ ಅವರನ್ನು ಹಾಗೂ ಎಸ್ಸೆಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಪಡೆದಿರುವ ಪ್ರತಿಜ್ಞಾ ಅವರನ್ನು ಸನ್ಮಾನಿಸಲಾಯಿತು.

ಉಪಪ್ರಾಂಶುಪಾಲ ದಿವಾಕರ ಮರಕಾಲ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿಯ ಸೀನಿಯರ್ ಛೇಂಬರ್ ಅಧ್ಯಕ್ಷ ಸುದೀಪ ಭಟ್, ಹೆಬ್ರಿ ಜೇಸಿಐ ಅಧ್ಯಕ್ಷ ಸೋನಿ ಪಿ. ಶೆಟ್ಟಿ, ಹಿರಿಯ ಅಧ್ಯಾಪಕ ವೆಂಕಟರಮಣ ಕಲ್ಕೂರ್, ರಘುರಾಮ ಶೆಟ್ಟಿ, ನಾಗೇಶ ನಾಯಕ್, ರವೀಂದ್ರ ಶೆಟ್ಟಿ, ಅಕ್ಷರ ಸಾಹಿತ್ಯ ಸಂಘದ ಅಧ್ಯಕ್ಷೆ ರಕ್ಷಿತಾ ಉಪಸ್ಥಿತರಿದ್ದರು. ಅಕ್ಷರ ಸಾಹಿತ್ಯ ಸಂಘದ ಸಂಚಾಲಕ ಮಂಜುನಾಥ ಕುಲಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಘದ ಸದಸ್ಯರಾದ ಸಹನಿ ಮತ್ತು ಸಾನ್ವಿ ಕಾರ್ಯಕ್ರಮ ನಿರೂಪಿಸಿದರು. ಗಣಿತ ಶಿಕ್ಷಕಿ ಸುಷ್ಮಾ ವಂದಿಸಿದರು. ಅಧ್ಯಾಪಕಿ ಶ್ರೇಯಾ ಬಹುಮಾನ ಪಟ್ಟಿ ವಾಚಿಸಿದರು.





























































































































error: Content is protected !!
Scroll to Top