ಉಡುಪಿ : ಯಾವಾಗಲೂ ಮೊಬೈಲ್ ಬಳಸುತ್ತಾಳೆಂದು ಎಂದು ಸಿಟ್ಟಿಗೆದ್ದ ಪತಿ ತನ್ನ ಪತ್ನಿಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಜೂನ್ 19ರ ರಾತ್ರಿ ನಡೆದಿದೆ.
ಕೊಲೆಗೀಡಾದವರನ್ನು ರೇಖಾ (27) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ, ಆಕೆಯ ಪತಿ ಗಣೇಶ ಪೂಜಾರಿ (42) ಎಂಬಾತನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗಣೇಶ್ ಪೂಜಾರಿ ವಿಪರೀತ ಮಧ್ಯ ವ್ಯಸನ ಚಟವುಳ್ಳವನಾಗಿದ್ದ. ಪತ್ನಿ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ವಿಪರೀತ ಮಧ್ಯ ಸೇವನೆ ಮಾಡಿ ಗುರುವಾರ ರಾತ್ರಿ ಮನೆಯಲ್ಲಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ.
ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಹಾಗೂ ರೇಖಾಳಿಗೆ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ರೇಖಾ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸಕ್ಕಿದ್ದರು. ಈ ಮಧ್ಯೆ ಗಣೇಶ್ ಮೊಬೈಲ್ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಗುರುವಾರ ತಡರಾತ್ರಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿದ್ದ. ಪತ್ನಿಗೆ ಕತ್ತಿಯಿಂದ ಕಡಿದಿದ್ದು ಗಂಭೀರ ಗಾಯಗೊಂಡ ರೇಖಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ಮನೆಯಿಂದ ಓಡಿ ಹೋಗಿದ್ದ ಆರೋಪಿ ಗಣೇಶ್ ಪೂಜಾರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

































































