ಕಸಗಳಿಂದ ತುಂಬಿದ ಹೆಬ್ರಿ ಬಸ್‌ ತಂಗುದಾಣ

ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೊಳಪಡುವ ಪೇಟೆಯ ಮಧ್ಯಭಾಗದಲ್ಲಿರುವ ಬಸ್‌ ತಂಗುದಾಣ ಕಸಗಳಿಂದ ತುಂಬಿದ್ದು, ಪಂಚಾಯತ್‌ನಿಂದ ಸ್ವಚ್ಛತೆಯ ಕಾರ್ಯಗಳು ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತದ ಪರಿಕಲ್ಪನೆಗಳು ಬರೀ ಭಾಷಣಕ್ಕೆ ಮಾತ್ರ ಸೀಮಿತಗೊಂಡಿದೆ. ಸಾರ್ವಜನಿಕ ಸ್ಥಳದ ಸ್ವಚ್ಛತೆಯ ವಿಷಯದಲ್ಲಿ ಆಡಳಿತ ವರ್ಗವೇ ಈ ರೀತಿ ಅಸಡ್ಡೆ ತೋರಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಪಂಚಾಯತ್‌ನಿಂದ ಕಸ ಸಂಗ್ರಹಿಸುವ ಕೆಲಸ ಕೇವಲ ವಾಹನದಲ್ಲಿ ಹಾಡು ಹಾಕಿಕೊಂಡು ತಿರುಗಾಡಲು ಮಾತ್ರ ಸೀಮಿತವಾಗಿದೆ. ಬಸ್‌ ನಿಲ್ದಾಣದಲ್ಲಿ ತುಂಬಿರುವ ಕಸದ ರಾಶಿಯನ್ನು ಕಂಡು ಸಾರ್ವಜನಿಕರೇ ಗುಡಿಸಿ ರಾಶಿ ಮಾಡಿ ಇಟ್ಟರೂ ಅದನ್ನು ಕೊಂಡು ಹೋಗುವ ಕೆಲಸವನ್ನು ಪಂಚಾಯತ್‌ನವರು ಮಾಡುತ್ತಿಲ್ಲ. ಪಂಚಾಯತ್‌ ವ್ಯಾಪ್ತಿಗೊಳಪಡುವ ಸಾರ್ವಜನಿಕ ಸ್ಥಳದಲ್ಲಿ ಕಸದ ಬುಟ್ಟಿಗಳನ್ನೂ ಇಡುತ್ತಿಲ್ಲ ಎನ್ನುವ ಆರೋಪಗಳು ಇವೆ. ಕಸ ಸಂಗ್ರಹ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದರೂ ತಿಂಗಳಿಗೆ ಹಣವನ್ನು ಮಾತ್ರ ಸಮಯಕ್ಕೆ ಸರಿಯಾಗಿ ಸಂಗ್ರಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗಗಳಿಗೆ ಆಹ್ವಾನ
ಜನರಿಗೆ ಆರಾಮದಾಯಕ ವಾತಾವರಣವನ್ನು ಒದಗಿಸಬೇಕಾದ ಬಸ್‌ ತಂಗುದಾಣದಲ್ಲಿ ಕಸಗಳೇ ತುಂಬಿ ತುಳುಕುತ್ತಿರುವುದರಿಂದ ರೋಗ ರುಜಿನಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಇನ್ನು ಮಳೆಗಾಲದಲ್ಲಂತು ಈ ರೀತಿ ಕಸ ತುಂಬಿದ್ದಲ್ಲಿ ಮಳೆಯ ನೀರಿಗೆ ಕೊಳೆತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಜನತೆ ಎಚ್ಚೆತ್ತುಕೊಳ್ಳಬೇಕು
ಕೇವಲ ಆಡಳಿತ ವರ್ಗವನ್ನು ದೂರಿದರೆ ಸಾಲದು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬಾರದೆಂಬ ಪರಿಜ್ಞಾನ ಜನತೆಗೂ ಇರಬೇಕು. ಸ್ವಚ್ಛತೆ ಮಾಡುವುದಿಲ್ಲ ಎಂದು ಬೆರಳು ತೋರಿಸುವ ಬದಲು ಕಸ ಹಾಕಬಾರದೆಂಬ ಮನೋಭಾವನೆಯನ್ನು ಜನತೆ ಬೆಳೆಸಿಕೊಳ್ಳಬೇಕು. ಸ್ವಚ್ಛತೆ ಕೇವಲ ಆಡಳಿತ ವರ್ಗದವರಿಗೆ ಮೀಸಲಾಗಿಲ್ಲ. ಪ್ರಜ್ಞಾವಂತ ನಾಗರೀಕರು ಕೂಡ ಇದಕ್ಕೆ ಹೊಣೆಯಾಗಿದ್ದಾರೆ. ಎಲ್ಲೆಂದರಲ್ಲಿ ಕಸ ಬಿಸಾಡುವ ಮೊದಲು ಆಲೋಚಿಸಬೇಕಲ್ಲವೇ? ನಾನು ಕೂಡ ಈ ಸಮಾಜದ ಒಂದು ಭಾಗವೆಂದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚೆತ್ತುಕೊಂಡರೆ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವ ಆಡಳಿತವರ್ಗದವರಿಗೂ ಒಂದು ಸಹಾಯ ಮಾಡಿದಂತಲ್ಲವೆ?

ದಂಡ ವಿಧಿಸಲಿ
ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ಪಂಚಾಯತ್‌ ಅಧಿಕಾರಿಗಳೂ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ಕಸ ಬೀಸಾಡಿದವರ ವಿರುದ್ಧ ದಂಡ ವಿಧಿಸುವ ಕೆಲಸವಾಗಬೇಕು. ಹಾಗಾದ್ದಲ್ಲಿ ಮಾತ್ರ ಜನ ಎಚ್ಚೆತ್ತುಕೊಳ್ಳುತ್ತಾರೆ. ಇನ್ನು ನಿರ್ದಿಷ್ಟ ಸಮಯಕ್ಕೆ ಸಾರ್ವಜನಿಕ ಸ್ಥಳಗಳಿಂದ ಕಸ ವಿಲೇವಾರಿಯ ಕೆಲಸ ಪಂಚಾಯತ್‌ನಿಂದಲೂ ನಡೆಯಬೇಕು. ಈ ಬಗ್ಗೆ ಆಡಳಿತ ವರ್ಗ ಗಮನಹರಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು.



















































































error: Content is protected !!
Scroll to Top