ಬೆಂಗಳೂರು: ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಮೂವರು ಹೋಟೆಲ್ ಸಿಬ್ಬಂದಿ ಮತ್ತು ಓರ್ವ ಗ್ರಾಹಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಮಾ. 1ರಂದು ಮಧ್ಯಾಹ್ನ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಊಟ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಪ್ರಾಥಮಿಕ ಹಂತದ ವರದಿಗಳು ತಿಳಿಸಿವೆ.
ಸ್ಫೋಟದ ಬಗ್ಗೆ ಮಾಹಿತಿ ಪಡೆದ ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ದಳ, ಬಾಂಬ್ ಸ್ಕ್ವಾಡ್ ಮತ್ತು ವಿಧಿವಿಜ್ಞಾನ ತಂಡಗಳು ಎಲ್ಲಾ ಸಾಕ್ಷ್ಯಗಳು ಮತ್ತು ಇತರ ವಿವರಗಳನ್ನು ಸಂಗ್ರಹಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.











































