ಸಂಸ್ಕೃತ ಜಗತ್ತಿಗೆ ಜ್ಞಾನದ ಬೆಳಕು ಪಸರಿಸಿದ ಭಾಷೆ – ರಾಘವೇಂದ್ರ ರಾವ್
ಮೂಡುಬಿದಿರೆ : ಭಾರತೀಯ ಪರಂಪರೆಯಲ್ಲಿ ಆರ್ಯರಾಗಿರುವ ನಾವು ಸಂಸ್ಕೃತ ಮಾತೆಯ ಮೊಲೆಹಾಲು ಕುಡಿಯದೆ ಬದುಕ ಸಾಗಿಸಲು ಸಾಧ್ಯವಿಲ್ಲ. ಜಗತ್ತಿಗೆ ಜ್ಞಾನದ ಬೆಳಕನ್ನು ಕೊಟ್ಟ ಭಾರತೀಯ ಭಾಷೆ ಸಂಸ್ಕೃತ. ಈ ಭಾಷೆಯಲ್ಲಿ ನಮ್ಮ ನೆಲದ ಹಿರಿಮೆ, ಗರಿಮೆ ಅಡಗಿದೆ ಎಂದು ಪಡುಬಿದ್ರೆಯ ಸಂಸ್ಕೃತ ಅಧ್ಯಾಪಕ ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು. ಅವರು ಸೆ. 1 ರಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮಫೋನಿನಲ್ಲಿ ಜರ್ಮನಿಯ ಮ್ಯಾಕ್ ಮುಲ್ಲರ್ ಕೊಟ್ಟ ಮೊದಲ ಧ್ವನಿ ಋಗ್ವೇದದ ಅಗ್ನಿಮೀಳೆ ಪುರೋಹಿತಂ. ರಾಷ್ಟ್ರ ಲಾಂಚನದ ಘೋಷ ವಾಕ್ಯ, ಸಂಸತ್ ಭವನದ ಒಳಗಿರುವ ಅಹಿಂಸಾ ಪರಮೋಧರ್ಮ, ಸಂಸ್ಕೃತದಲ್ಲಿರುವ ವೇದ, ಪುರಾಣ, ರಾಮಾಯಣ, ಮಹಾಭಾರತ ಹೀಗೆ ಪ್ರತಿಯೊಂದೂ ನಮ್ಮ ನೆಲದ ಕಣಕಣದಲ್ಲೂ ಚೈತನ್ಯವನ್ನು ಅಂತರ್ಯಾಮಿಯಾಗಿಸಿದೆ. ಒಗಟುಗಳು, ಗಾದೆಗಳು ಹೀಗೆ ಪ್ರತಿಯೊಂದರಲ್ಲೂ ಸಂಸ್ಕೃತ ನಮ್ಮನ್ನು ಜೀವನಾನುಭವಗಳಿಂದ ಪಕ್ವಗೊಳಿಸುತ್ತದೆ ಎಂದರು.
ಭಿತ್ತಿಪತ್ರ ಅನಾವರಣ
ವಿಶ್ವ ಸಂಸ್ಕೃತ ದಿನಾಚರಣೆಯ ಪ್ರಯುಕ್ತ ಸಂಸ್ಕೃತ ಕಾವ್ಯಗಳ ಉಕ್ತಿ ಹಾಗೂ ಅರ್ಥಗಳನ್ನೊಳಗೊಂಡ ಭಿತ್ತಿ ಪತ್ರವನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಸಂಸ್ಕೃತವು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ರಾಯಭಾರಿ ಭಾಷೆಯಾಗಿದೆ. ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಕ್ಷೇತ್ರಕ್ಕೆ ಸಂಸ್ಕೃತದ ಕೊಡುಗೆ ಅಪೂರ್ವವಾದದ್ದು, ಸಮಾಜ ಕಟ್ಟುವಲ್ಲಿ ಬೇಕಾದ ಸಾಮರಸ್ಯ, ವಿಜ್ಞಾನ, ಸಾಹಿತ್ಯ ಹೀಗೆ ಎಲ್ಲದರಲ್ಲೂ ಸಂಸ್ಕೃತದ ಕೊಡುಗೆ ಮಹತ್ತರವಾದದ್ದು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭ ವಿದ್ಯಾರ್ಥಿನಿಯರಾದ ಈಶಾ ಪಟವರ್ಧನ್, ಅನಘ ಕವಿಕುಲತಿಲಕ ಕಾಳಿದಾಸನ ಕುಮಾರಸಂಭವ ಹಾಗೂ ವಿದ್ಯಾರ್ಥಿನಿಯರಾದ ಅನುಶಾ, ಐಶ್ವರ್ಯ, ಧೃತಿ ಅಭಿಜ್ಞಾನ ಶಾಕುಂತಲದ ವಾಚನ-ವ್ಯಾಖ್ಯಾನ, ಭಗವದ್ಗೀತಾ ಪಠಣ, ರಾಮಾದರ್ಶವನ್ನು ಸಾರುವ ರೂಪಕವನ್ನು ಭರತನಾಟ್ಯ ಪ್ರದರ್ಶಿಸಿದರು. ವಿದ್ಯಾರ್ಥಿಗಳು ಸಂಪೂರ್ಣ ಕಾರ್ಯಕ್ರಮವನ್ನು ಸಂಸ್ಕೃತದಲ್ಲಿ ನಡೆಸಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ಸಂಸ್ಕೃತ ಉಪನ್ಯಾಸಕ ತೇಜಸ್ವೀ ಭಟ್ ಸ್ವಾಗತಿಸಿದರು. ಸುಪ್ರಜಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕೃತ ಶಿಕ್ಷಕ ಪಾರ್ಶ್ವನಾಥ ಜೈನ್ ವಂದಿಸಿದರು.