ಕಸ್ತೂರಿ ರಂಗನ್ ವರದಿ ಅನುಷ್ಠಾನದ ಕುರಿತು ಜನಾಭಿಪ್ರಾಯ ಸಂಗ್ರಹ
ಕಾರ್ಕಳ : ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತಾದ ಸರಕಾರ ಚಿಂತನೆಗೆ ಭಾರತೀಯ ಕಿಸಾನ್ ಸಂಘವು ಈಗಾಗಲೇ ತನ್ನ ಆಕ್ಷೇಪವನ್ನು ಸಲ್ಲಿಸಿದೆ. ವರದಿಯ ಕುರಿತು ಪ್ರತಿ ಗ್ರಾಮಗಳಲ್ಲಿ ಚರ್ಚೆ ನಡೆಸಿ ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ತೊಂದರೆಯಾಗುವ ವಿಷಯಗಳನ್ನು ಚರ್ಚಿಸಲಾಗುತ್ತದೆ. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಹಾಗೂ ಮಾಹಿತಿ ನೀಡುವ ಸಲುವಾಗಿ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳನ್ನೊಳಗೊಂಡಂತೆ ಬೃಹತ್ ಮಟ್ಟದ ಸಭೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ತಿಳಿಸಿದರು.
ಅವರು ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸ್ತೂರಿ ರಂಗನ್ ವರದಿ ಬಗ್ಗೆ ಜನಾಭಿಪ್ರಾಯ ಸಂಗ್ರಹ ಮಾಡುವುದು ಅಗತ್ಯ. ಈ ಸಭೆಗೆ ಜಿಲ್ಲಾಧಿಕಾರಿಗಳನ್ನೊಳಗೊಂಡಂತೆ ಸಂಬಂಧಿಸಿದ ಅಧಿಕಾರಿಗಳನ್ನು ಆಹ್ವಾನಿಸಲಾಗುವುದು. ಒಟ್ಟಿನಲ್ಲಿ ರೈತರಿಗೆ ಮತ್ತು ಗ್ರಾಮಸ್ಥರಿಗೆ ತೊಂದರೆಯಾಗದ ರೀತಿಯಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಇನ್ನಾ ಗ್ರಾಮ ಕೈಬಿಡಿ
ಉಡುಪಿ – ಕಾಸರಗೋಡು ವಿದ್ಯುತ್ ಸಂಪರ್ಕ ಯೋಜನೆಯ ಹಿನ್ನೆಲೆಯಲ್ಲಿ 400 ಕೆವಿ ಸಾಮರ್ಥ್ಯದ ಹೈಟೆನ್ಸನ್ ಲೈನ್‌ಗಳು ಇನ್ನಾ ಗ್ರಾಮದ ಮುಖಾಂತರ ಹಾದು ಹೋಗಲಿದೆ. ಒಂದು ವೇಳೆ ಈ ಯೋಜನೆ ಜಾರಿಗೊಂಡಲ್ಲಿ ಗ್ರಾಮದ ಸುಮಾರು ಅರ್ಧಕ್ಕಿಂತ ಹೆಚ್ಚು ಕೃಷಿ ಭೂಮಿಗಳು ನಾಶವಾಗಲಿದೆ. ಇದಕ್ಕೆ ಗ್ರಾಮದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿಯು ಹೋರಾಟಕ್ಕೆ ಬೆಂಬಲವನ್ನು ಸೂಚಿಸಲಿದೆ. ಅಲ್ಲದೆ ಈ ಯೋಜನೆಯಿಂದ ಇನ್ನಾ ಗ್ರಾಮವನ್ನು ಕೈಬಿಡಬೇಕು ಎಂದು ಒತ್ತಾಯಿಸಲಿದೆ ಎಂದು ಗೋವಿಂದರಾಜ್ ಭಟ್ ತಿಳಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಇತ್ತೀಚೆಗೆ ನಡೆದ ಜಿಲ್ಲಾ ಅಭ್ಯಾಸವರ್ಗದ ಮಾಹಿತಿ ಹಾಗೂ ಮುಂದಿನ ಜನವರಿ ತಿಂಗಳಲ್ಲಿ ನಡೆಯಲಿರುವ ಸದಸ್ಯತನ ಅಭಿಯಾನದ ಕುರಿತು ಮಾಹಿತಿ ನೀಡಿದರು.
ಪುನಃ ಜಾರಿಯಾಗಲಿ
ರೈತ ವಿದ್ಯಾನಿಧಿ, ಸಿಎಂ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಕೃಷಿ ಸಂಬಂಧಿತ ಕೆಲವು ಯೋಜನೆಗಳು ರದ್ದಾಗಿದ್ದು, ಈ ಯೋಜನೆಯನ್ನು ಪುನಃ ಜಾರಿಗೊಳಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಸುಂದರ ಶೆಟ್ಟಿ ಮುನಿಯಾಲು, ಉಪೇಂದ್ರ ನಾಯಕ್ ಮರ್ಣೆ, ಕೆ.ಪಿ. ಭಂಡಾರಿ ಕೆದಿಂಜೆ, ಕಾರ್ಯದರ್ಶಿ ಶಿವಪ್ರಸಾದ್ ಭಟ್ ದುರ್ಗಾ ಹಾಗೂ ಗ್ರಾಮ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರ್ವಹಿಸಿದರು.