ತಾಲೂಕು ಕಚೇರಿ ಮುಂಭಾಗ ಸತ್ಯಾಗ್ರಹ ನಡೆಸಿದ ದಿವ್ಯಾ ನಾಯಕ್ ತಂಡ
ಕಾರ್ಕಳ : ಬೈಲೂರು ಥೀಮ್ ಪಾರ್ಕ್‌ನಲ್ಲಿರುವ ಪರಶುರಾಮನ ವಿಗ್ರಹದ ನೈಜತೆ ಹಾಗೂ ಗುಣಮಟ್ಟದ ಪರಿಶೀಲನೆಗಾಗಿ ಆಗ್ರಹಿಸಿ ಸೆ. 2ರಂದು ಕಾರ್ಕಳ ತಾಲೂಕು ಕಚೇರಿ ಮುಂಭಾಗ ಮುತಾಲಿಕ್ ತಂಡದಲ್ಲಿ ಸಕ್ರಿಯರಾಗಿದ್ದ ದಿವ್ಯಾ ನಾಯಕ್ ತಂಡ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದೆ. ಸೆ. 26ರಂದು ಈ ತಂಡ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಅಂದು ತಹಶೀಲ್ದಾರ್ ಅವರ ಮನವಿಯ ಮೇರೆಗೆ ಹೋರಾಟ ಹಿಂಪಡೆಯಲಾಯಿತು. ಆದರೆ, ಇಲ್ಲಿಯವರೆಗೆ ಸಂಬಂಧಪಟ್ಟ ಅಧಿಕಾರಿಗಳಿಂದ ತನಿಖೆಯ ಕುರಿತು ಯಾವುದೇ ಪ್ರತಿಕ್ರಿಯೆ ಅಥವಾ ಆದೇಶ ಬರದೇ ಇರುವ ಕಾರಣ ಮತ್ತೆ ಇಂದು ತಾಲೂಕು ಕಚೇರಿಯ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇವೆ ಎಂದು ಚಿತ್ತರಂಜನ್ ಶೆಟ್ಟಿ ಹೇಳಿದ್ದಾರೆ.
ಸಾರ್ವಜನಿಕವಾಗಿ ಪರೀಕ್ಷೆ ನಡೆಯಲಿ
ಪರಶುರಾಮನ ವಿಗ್ರಹ ಕಂಚಿನದ್ದಲ್ಲ, ಬದಲಾಗಿ ತಾತ್ಕಾಲಿಕ ಪರಿಕರಗಳಿಂದ ನಿರ್ಮಿಸಿರುವಂತದ್ದಾಗಿದೆ ಎಂದು ಆರೋಪಿಸಿರುವ ಅವರು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಪರೀಕ್ಷೆ ನಡೆಸಬೇಕು. ಅಲ್ಲದೆ, ಈ ಪರೀಕ್ಷೆ ಸಾರ್ವಜನಿಕರ ಉಪಸ್ಥಿತಿಯಲ್ಲಿ ನಡೆಯಬೇಕು. ಒಂದು ವೇಳೆ ತನಿಖೆ ನಡೆಯದಿದ್ದಲ್ಲಿ ಇದರಿಂದ ಸಾರ್ವಜನಿಕವಾಗಿ ಡೊಡ್ಡ ಹಾನಿಯಾಗಲಿದೆ ಎಂದವರು ಹೇಳಿದರು.
ಈ ಸಂದರ್ಭ ದಿವ್ಯಾ ನಾಯಕ್, ವಿವೇಕ್ ಶೆಟ್ಟಿ, ದುಷ್ಯಂತ್ ಶೆಟ್ಟಿ, ಸತ್ಯ ರಂಜನ್ ಶೆಟ್ಟಿ, ಅಭಿ, ಕಿರಪ್ ಪೈ, ವಿಜಯ್ ಪೂಜಾರಿ, ರಾಘವ್ ಮುದ್ರಾಡಿ, ಶುಭಾಷ್, ಮಂಜುನಾಥ್ ಶೆಟ್ಟಿ, ಶುಭದ ರಾವ್, ವಿವೇಕ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.