ಉಡುಪಿ : ಉಡುಪಿಯ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ಓರ್ವ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ವಿವಾದ ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಇದೀಗ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ಅವರನ್ನು ಬದಲಾವಣೆ ಮಾಡಲಾಗಿದೆ. ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ಉಡುಪಿ ಎಸ್.ಪಿ. ಅಕ್ಷಯ್ ನೇಮಕ ಮಾಡಿದ್ದಾರೆ.
ಆರಂಭದಿಂದ ತನಿಖೆ ನಡೆಸಿಕೊಂಡು ಬಂದಿದ್ದ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡರನ್ನು ಬದಲಾಯಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಅದರಂತೆಯೇ ಇದೀಗ ಬದಲಾವಣೆ ಮಾಡಿ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪರಿಗೆ ತನಿಖೆ ವಹಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪ್ರಕರಣ ಮತ್ತು ಶಿರೂರು ಸ್ವಾಮೀಜಿ ಸಾವು ಪ್ರಕರಣದಲ್ಲೂ ದಕ್ಷ ತನಿಖಾಧಿಕಾರಿಯಾಗಿ ಬೆಳ್ಳಿಯಪ್ಪ ಅವರು ಕಾರ್ಯನಿರ್ವಹಿಸಿದ್ದರು. ಕಾರ್ಕಳ ಎಎನ್‌ಎಫ್ ಕ್ಯಾಂಪ್‌ನಲ್ಲಿ 2 ವರ್ಷ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.
ಚುರುಕುಗೊಂಡ ಉಡುಪಿ ಪೊಲೀಸ್ ತನಿಖೆ
ಸದ್ಯ ಐಜಿಪಿ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆಯನ್ನು ಮಹಿಳಾ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಆಪರೇಟ್ ಆಗುತ್ತಿದ್ದ ಎಲ್ಲ ಮೊಬೈಲ್ಗಳ ಕಾಲ್ ಡೀಟೇಲ್ಸ್ಗಳನ್ನು ಪತ್ತೆ ಹಚ್ಚಿದ್ದು, ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ಜೊತೆಗೆ ಅನಗತ್ಯ ವ್ಯಕ್ತಿಗಳು ಕಾಂಪೌಂಡ್ ಆವರಣದಲ್ಲಿ ಓಡಾಟ ಆರೋಪ ಕೇಳಿಬಂದಿದ್ದು, ಕಾಲೇಜು ಆವರಣದಲ್ಲಿನ ಸಿಸಿ ಕ್ಯಾಮರಾಗಳ ಫೂಟೇಜನ್ನು ವಶಕ್ಕೆ ಪಡೆಯಲಾಗಿದೆ.
















































































