ಬೆಂಗಳೂರು: ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಯ ಇ ಕೆವೈಸಿ ಗೆ ಸಂಬಂಧಿಸಿದ ಹಾಗೆ ಮಹತ್ವದ ವಿಷಯವೊಂದನ್ನು ತಿಳಿಸಿದೆ.
ರೇಷನ್ ಕಾರ್ಡ್ ಇ ಕೆವೈಸಿಗೆ ನಿಗದಿ ಮಾಡಲಾಗಿದ್ದ ಗಡುವನ್ನು ಮತ್ತಷ್ಟು ಮುಂದೂಡಿದೆ. ಸೆ. 30 ರ ವರೆಗೆ ನೀಡಲಾಗಿದ್ದ ಇ ಕೆವೈಸಿ ಗಡುವನ್ನು ಅ. 20 ರ ವರೆಗೆ ಮುಂದೂಡಿ ಆದೇಶ ಹೊರಡಿಸಿದೆ.
ಹಾಗೆಯೇ ರೇಷನ್ ಪಡೆಯುವ ಫಲಾನುಭವಿಗಳ ಅನುಕೂಲಕ್ಕಾಗಿ ನ್ಯಾಯಬೆಲೆ ಅಂಗಡಿ ಸಮಯವನ್ನು ಬೆಳಿಗ್ಗೆ 7 ರಿಂದ 12ವರೆಗೂ, ಸಂಜೆ 4 ರಿಂದ 8 ಗಂಟೆಯವರೆಗೂ ವಿಸ್ತರಣೆ ಮಾಡಿದೆ. ಪ್ರತಿ ದಿನ 8 ತಾಸು ಪಡಿತರ ವಿತರಣೆ ಮಾಡಲೇಬೇಕು ಎಂದು ಸೂಚನೆ ನೀಡಲಾಗಿದೆ. ಇದರಿಂದ ಕೆವೈಸಿ ಬಾಕಿ ಉಳಿಸಿಕೊಂಡ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.

ಈ ಮೊದಲು ಇ ಕೆವೈಸಿಗೆ ಸೆ. 30 ಕೊನೆಯ ದಿನವಾಗಿತ್ತು. ಆದರೆ ಸರ್ವರ್ ಸಮಸ್ಯೆಯಿಂದ ಸಾಕಷ್ಟು ಮಂದಿ ಪರಿಶೀಲನೆ ಕಾರ್ಯ ಸಾಧ್ಯವೇ ಆಗಿರಲಿಲ್ಲ. ಗಡುವು ಮೀರುತ್ತದೆ ಎಂದು ಸಾರ್ವಜನಿಕರು ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವಂತಾಗಿತ್ತು. ಇನ್ನೂ ಗ್ರಾಮೀಣ ಭಾಗದಲ್ಲಿ ಸರ್ವರ್ ಸಮಸ್ಯೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧರಿಗೆ ಈ ಪ್ರಕ್ರಿಯೆಯಿಂದ ತೀವ್ರ ತೊಂದರೆಯಾಗುತ್ತಿತ್ತು. ಸದ್ಯ ಕೊನೆಯ ದಿನ ವಿಸ್ತರಣೆಯಾಗಿರುವುದು ಸಹಕಾರಿಯಾಗಲಿದೆ.















































































