ಹುಬ್ಬಳ್ಳಿ: ರಾಜ್ಯದ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ನ. 3 ರ ವರೆಗೆ ಈಡೇರಿಸದೇ ಹೋದಲ್ಲಿ ಅನಿರ್ಧಿಷ್ಟಾವಧಿಯವರೆಗೆ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ ಎಚ್ಚರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರಿ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ಮಾಡಲಾಗುವುದು. ಸರ್ಕಾರಿ ಶಾಲೆ ಜೊತೆ ಅನುದಾನಿತ ಶಾಲೆಗಳು ಹಲವು ದಶಕಗಳಿಂದ ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜ್ ಹಲವಾರು ಸಮಸ್ಯೆಗಳ ಎದುರಿಸುತ್ತಿವೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಂದ ಅನುದಾನಿತ ಶಾಲಾ ಕಾಲೇಜುಗಳು ಮುಚ್ಚುವ ಸ್ಥಿತಿ ತಲುಪಿವೆ. ಉತ್ತರ ಕರ್ನಾಟಕದಲ್ಲಿ ಶೇ. 60 ರಷ್ಟು ಖಾಸಗಿ ಅನುದಾನಿತ ಶಾಲೆಗಳಿವೆ. ಶಿಕ್ಷಕರ ಕೊರತೆಯೂ ಇದೆ. ಅನೇಕ ಸಂಸ್ಥೆಗಳ ಸಂಕಷ್ಟ ಎದುರಿಸುತ್ತಿವೆ. ಶಿಕ್ಷಣ ವ್ಯವಸ್ಥೆ ಹದಗೆಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗಳಿಗೆ ಇರುವ ನಿಯಮಗಳು ಅನುದಾನಿತ ಶಾಲೆಗಳಲ್ಲಿಯೂ ಬರಬೇಕು ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.








































