ಬೆಂಗಳೂರು: ಪ್ರತಿಷ್ಟಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್‌ನಾಗ್ ಅವರು ಸಂತಸ ಹಂಚಿಕೊಂಡಿದ್ದಾರೆ.
ಕನ್ನಡಿಗರ ಪ್ರೀತಿಯಿಂದಲೇ ತಮಗೆ ಈ ಪ್ರಶಸ್ತಿ ಬಂದಿದೆ ಎಂದು ಅವರು ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಈ ಸಂಬಂಧ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಸಿನಿಮಾ ರಂಗಕ್ಕೆ ಮೀಸಲಾದ ಅತ್ಯುನ್ನತ ಪ್ರಶಸ್ತಿ ತಮಗೆ ಒಲಿದು ಬಂದಿರುವುದು ನಿಜಕ್ಕೂ ಸಂತಸ ತಂದಿದೆ. ಇದಕ್ಕಾಗಿ ಕನ್ನಡಿಗರಿಗೆ ತಾವು ಮೊದಲ ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ. ಇದು ಕನ್ನಡದ ಜನರ ಪ್ರೀತಿಯ ಫಲ. ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿ ತಮಗೆ ಬಂದಿದ್ದು ಅದಕ್ಕೂ ಕಾರಣ ಕನ್ನಡಿಗರ ಪ್ರೀತಿ ಎಂದು ಹೇಳಿದ್ದಾರೆ.

ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಂತ್‌ನಾಗ್ ಅವರು ನಟಿಸಿದ್ದು, ತಾನು ಇಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದೇನಾ ಎಂದು ಕೆಲವೊಮ್ಮೆ ಆಶ್ಚರ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದಲ್ಲಿ ತಾನು ವರ್ಷಕ್ಕೆ ಐದಾರು ಚಿತ್ರಗಳಲ್ಲಿ ನಟಿಸುತ್ತಿದ್ದು, ಇದರಿಂದ ತನಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಲು ಅನುಕೂಲವಾಯಿತು ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.














































































