ಮಂಗಳೂರು ಜೈಲಿನ ಜಾಮರ್ ‌ತೆರವು ಮಾಡದಿದ್ದರೆ ಸೆ. 18 ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ವಕೀಲರಿಂದ ಮುತ್ತಿಗೆ

ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಯಾಗುತ್ತಿರುವ ಜೈಲಿನ ಜಾಮರ್ ವಿರುದ್ಧ ಸಿಡಿದೆದ್ದ ವಕೀಲರ ಸಂಘ

ಮಂಗಳೂರು: ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾದ ಮೊಬೈಲ್ ನೆಟ್‌ವರ್ಕ್ ಜಾಮರ್‌ನಿಂದ ಸಾರ್ವಜನಿಕರ ಜೊತೆಗೆ ನ್ಯಾಯಾಲಯದ ಕೆಲಸಗಳಿಗೂ ಅಡಚಣೆಯಾಗುತ್ತಿದ್ದು ಅದನ್ನು ತೆಗೆಯುವಂತೆ ಒತ್ತಾಯಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಸೆ. 18 ರಂದು ಮುತ್ತಿಗೆ ಹಾಕುವುದಾಗಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾಮರ್‌ನಿಂದ ಸಮಸ್ಯೆಯಾಗುತ್ತಿರುವ ಸಂಗತಿಯನ್ನು ಮುಖ್ಯಮಂತ್ರಿಗ‌ಳ ಗಮನಕ್ಕೆ ಹಲವಾರು ಬಾರಿ ತರಲಾಗಿದೆ. ಆದರೂ ಇದರಿಂದ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ಸೆ. 18 ರಂದು ವಕೀಲರುಗಳೆಲ್ಲರೂ ಸೇರಿ ಪಡೀಲಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಸುಮಾರು 250 ವಕೀಲರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆ ನಡೆಸಿದರೆ ನಮ್ಮ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂಬ ಸಂಪೂರ್ಣ ಅರಿವು ನಮಗಿದೆ. ಇದರಿಂದಾಗುವ ಪರಿಣಾಮ ಗೊತ್ತಿದ್ದೇ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಸರ್ಕಾರ ಬೇಕಿದ್ದರೆ ನಮ್ಮ ಮೇಲೆ ಗೋಲಿಬಾರ್ ಮಾಡಲಿ, ಆದರೆ ನಾವು ಮಾತ್ರ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಸಹ ಸೆ. 18 ರಂದೇ ನಡೆಯಲಿದ್ದು, ಸಚಿವ ಸಂಪುಟ ಸಭೆಗೆ ಕಟ್ಟುನಿಟ್ಟಿನ ಭದ್ರತೆ ನೀಡುವುದು ಸರ್ಕಾರದ ಮೊದಲ ಆದ್ಯತೆಯಾದರೆ, ಜೈಲಿನ ಜಾಮರ್ ತೆರವುಗೊಳಿಸುವುದೇ ನಮ್ಮ ಮೊದಲ ಆದ್ಯತೆ. ಸರ್ಕಾರ ತಕ್ಷಣವೇ ಜೈಲಿನ ಮೊಬೈಲ್‌ ಜಾಮರ್‌ ಅನ್ನು ತೆರವುಗೊಳಿಸಲಿ. ಇದರ ಶ್ರೇಯಸ್ಸು (Credit) ನಮಗೆ ಬೇಕಿಲ್ಲ, ಯಾರು ಬೇಕಾದರೂ ತೆಗೆದುಕೊಳ್ಳಲಿ. ನಮ್ಮ ಈ ಹೋರಾಟದಲ್ಲಿ ಯಾವುದೇ ರಾಜಕೀಯವಿಲ್ಲ. ಜಾಮರ್‌ನಿಂದಾಗಿ ನ್ಯಾಯಾಲಯದ ದೈನಂದಿನ ಕಲಾಪಗಳಿಗೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ನೆಟ್‌ವರ್ಕ್ ಸಮಸ್ಯೆ ಬಗೆಹರಿದರೆ ಅಷ್ಟೇ ಸಾಕು ಎಂದು ಜಗದೀಶ್ ಶೇಣವ ಅವರು ತಿಳಿಸಿದ್ದಾರೆ.































































































































































error: Content is protected !!
Scroll to Top