ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ 76 ನೇ ಜನ್ಮದಿನದ ಸಂಭ್ರಮ ಮತ್ತು ಅವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು 25 ವರ್ಷಗಳಾಗಿರುವ ಹಿನ್ನೆಲೆ ಬಿಜೆಪಿಯು ‘ಸೇವಾ ಸಂಕಲ್ಪ ಅಭಿಯಾನ’ವನ್ನು ಇಂದಿನಿಂದ ಆರಂಭಿಸುತ್ತಿದೆ.
ಈ ಅಭಿಯಾನವು ಸೆ. 17 ರಿಂದ ಅಕ್ಟೋಬರ್ 17 ರ ವರೆಗೆ ನಡೆಯಲಿದೆ.
ಪ್ರಧಾನಿ ಮೋದಿ ಅವರಿಗೆ ಹಲವಾರು ಗಣ್ಯರು ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಬಿಜೆಪಿ ನಾಯಕರು ಮತ್ತು ವಿಪಕ್ಷ ನಾಯಕರಿಂದಲೂ ಪ್ರಧಾನಿ ಮೋದಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಪ್ರಧಾನಿ ಮೋದಿ ಜನ್ಮದಿನದ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯಗಳನ್ನು ಕೋರಿ ಸಂದೇಶ ಹಂಚಿಕೊಂಡಿದ್ದು, ಕಳೆದ 25 ವರ್ಷಗಳಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ನಿಮ್ಮ ಆಡಳಿತಾವಧಿಯಲ್ಲಿ, ಉತ್ತಮ ಆಡಳಿತದ ಅನೇಕ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದೀರಿ. ಹಾಗೂ ಸಮಾವೇಶಿ ಅಭಿವೃದ್ಧಿಗೆ ಅಭೂತಪೂರ್ವ ವೇಗ ಮತ್ತು ಹೊಸ ದಿಕ್ಸೂಚಿಯನ್ನು ನೀಡಿದ್ದೀರಿ. ಸಾಂಸ್ಕೃತಿಕ ಹೆಮ್ಮೆಯ ಭಾವನೆಯೊಂದಿಗೆ ಆಧುನಿಕ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವ ನಮ್ಮ ದೇಶವಾಸಿಗಳು, ಪರಂಪರೆ ಮತ್ತು ಅಭಿವೃದ್ಧಿಯ ಸಮನ್ವಯವನ್ನು ಸಾಕಾರಗೊಳಿಸುತ್ತಿದ್ದಾರೆ. ಜನಸೇವೆ ಮತ್ತು ರಾಷ್ಟ್ರ ನಿರ್ಮಾಣದ ನಿಮ್ಮ ಅಭಿಯಾನವನ್ನು ನಿರಂತರವಾಗಿ ಮುನ್ನಡೆಸಲು, ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.














































































