ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಪ್ರಯತ್ನ: ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು: ತುಳುವಿಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ತೌಳವರ ಕೂಗು ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಸಚಿವ ಶಿವರಾಜ್ ತಂಗಡಗಿ ನೀಡಿದ ಹೇಳಿಕೆಯೊಂದು ತುಳುನಾಡಿನಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.

ಶಿವರಾಜ್ ತಂಗಡಗಿ ಅವರು, ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದ ಹಾಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಸಾಂವಿಧಾನಾತ್ಮಕವಾಗಿ ಮತ್ತು ಕಾನೂನು ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ ಸಂಸ್ಕೃತಿ ಮತ್ತು ತುಳು ಶಾಸನಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ಡಾ. ಮೋಹನ್‌ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ತನ್ನ ಅಧ್ಯಯನ ನಡೆಸಿ 2023ರ ಫೆಬ್ರುವರಿ 14ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಮುಂದುವರಿದ ಹಂತವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಥವಾ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಮಾದರಿಗಳನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ 2025ರ ಜುಲೈ 30ರಂದು ಅಧ್ಯಯನ ತಂಡ ರಚಿಸಿತ್ತು. ಅಧ್ಯಯನ ತಂಡವು 2026ರ ಜನವರಿ 19 ಮತ್ತು 20ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ ಕಾನೂನು ಚೌಕಟ್ಟು ಹಾಗೂ ಅನುಷ್ಠಾನದ ಮಾದರಿಗಳನ್ನು ಪರಿಶೀಲಿಸಿತ್ತು. ಈ ಅಧ್ಯಯನದ ಆಧಾರದ ಮೇಲೆ ತಂಡವು 2026ರ ಮಾರ್ಚ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಸಚಿವ ತಂಗಡಗಿ ತಿಳಿಸಿದ್ದಾರೆ.

ತುಳು ಭಾಷೆಯ ಕುರಿತು ಮಾತನಾಡಿರುವ ಸಚಿವ ತಂಗಡಗಿ, ತುಳು ನಮ್ಮ ಕರಾವಳಿಯ ಭಾಷೆ. ಅದು ಕರ್ನಾಟಕದ ಶ್ರೀಮಂತ ಭಾಷಾ-ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ತುಳು ಭಾಷೆಯ ಗೌರವ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಕಾನೂನಿನ ಚೌಕಟ್ಟಿನೊಳಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ. ತುಳು ಭಾಷೆಯಲ್ಲಿಯೂ ಸಂದೇಶ ನೀಡಿರುವ ಅವರು, ‘ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪುವೆ’ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಚಿವರ ಹೇಳಿಕೆ ಕರ್ನಾಟಕದ ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಹೊಸ ನಿರೀಕ್ಷೆ ಉದಯವಾಗಿದೆ ಎನ್ನಬಹುದು. ತುಳುವಿಗೆ ಸ್ಥಾನಮಾನ ಸಿಗುವುದೇ ಎನ್ನುವುದು ಜನರ ಸದ್ಯದ ಪ್ರಶ್ನೆ.

































































































































































error: Content is protected !!
Scroll to Top